ADVERTISEMENT

ಹೈ–ಕ; ಪ್ರತಿಭಾವಂತರಿಗೆ ಕೊರತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:12 IST
Last Updated 8 ಫೆಬ್ರುವರಿ 2018, 9:12 IST

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದರೆ ಅನೇಕರು ಐಎಎಸ್‌ ಅಧಿಕಾರಿಗಳಾಗಬಹುದು. ಈ ಭಾಗದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ’ ಎಂದು ವಾಗ್ಮಿ ಡಾ. ನಾ.ಸೋಮೇಶ್ವರ ಹೇಳಿದರು.

ನಗರದ ಮದರ್ ತೆರೆಸಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆ, ಕಲಾ ಮಹಾವಿದ್ಯಾಲಯ ಹಾಗೂ ಬಿ.ಇಡಿ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ವಿದ್ಯಾಭ್ಯಾಸದ ಜತೆಗೆ ಅವರ ದೈಹಿಕ ಆರೋಗ್ಯದ ಬಗ್ಗೆಯೂ ಪೋಷಕರು ಕಾಳಜಿ ವಹಿಸಬೇಕು. ಅವರಿಗೆ ಹಾಲು, ಹಣ್ಣು, ತರಕಾರಿ ಹಾಗೂ ಕಾಳುಗಳನ್ನು ದಿನ ನಿತ್ಯದ ಊಟದಲ್ಲಿ ತಪ್ಪದೆ ಕೊಡಬೇಕು. ಸಿದ್ಧ ಆಹಾರಗಳು ಹಾಗೂ ತಂಪು ಪಾನೀಯಗಳನ್ನು ಕೊಡಬಾರದು. ಇವುಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

ಸಂಸ್ಥೆಯ ಉಪಾಧ್ಯಕ್ಷ ಎಂ.ವೈ.ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳು ಕೃಷಿ ಕ್ಷೇತ್ರದಲ್ಲೂ ಆಸಕ್ತಿ ವಹಿಸಬೇಕು. ರೈತರಿಗೆ ಅನುಕೂಲವಾಗುವ ಉಪಕರಣಗಳನ್ನು ಆವಿಷ್ಕರಿಸಬೇಕು’ ಎಂದು ತಿಳಿಸಿದರು. ಪ್ರಭುರಾಜಪ್ಪ ಬಸವರಾಜಪ್ಪ ಅಪ್ಪ ಸಾನ್ನಿಧ್ಯ ವಹಿಸಿದ್ದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಅಧ್ಯಕ್ಷತೆ ವಹಿಸಿದ್ದರು.

10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪುರಸ್ಕಾರ ನೀಡಲಾಯಿತು. ಗರೂರ ಗ್ರಾಮದ ಪ್ರಗತಿಪರ ರೈತ ಶಾಮರಾವ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ, ಬಿ.ಇಡಿ ಕಾಲೇಜಿನ ಪ್ರಾಚಾರ್ಯರಾದ ಡಾ. ವನಿತಾ ಜಾಧವ್, ಕಲಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಎಸ್.ಬಿ.ದಯಾನಂದ, ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಆಡಳಿತಾಧಿಕಾರಿ ಪ್ರಕಾಶ ಕವಿಶೆಟ್ಟಿ ಇದ್ದರು. ಶಾಲೆಯ ಪ್ರಾಂಶುಪಾಲ ನಾಗೇಂದ್ರ ಬಡಿಗೇರ ಸ್ವಾಗತಿಸಿದರು. ದೀಪಾ ಪಾಟೀಲ, ಶಿಕ್ಷಕಿ ದಿವ್ಯಾ ದೇಶಪಾಂಡೆ ನಿರೂಪಿಸಿದರು. ಶಿಕ್ಷಕಿ ಮಂಜುಶ್ರೀ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.