ADVERTISEMENT

ಸೇಡಂ: ಅತಿದೊಡ್ಡ ಕಲ್ಯಾಣ ಮಂಟಪ ನಿರ್ಮಾಣ

ಅವಿನಾಶ ಬೋರಂಚಿ
Published 10 ಫೆಬ್ರುವರಿ 2018, 9:53 IST
Last Updated 10 ಫೆಬ್ರುವರಿ 2018, 9:53 IST

ಸೇಡಂ: ಪಟ್ಟಣದ ಚಿಂಚೋಳಿ ರಸ್ತೆಗೆ ಹೊಂದಿಕೊಂಡಿರುವ ಬಿಬ್ಬಳ್ಳಿ ಕ್ರಾಸ್ ಬಳಿ ಸುಮಾರು ₨3 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.

ಸೇಡಂನಲ್ಲಿ ಅತಿದೊಡ್ಡ ಕಲ್ಯಾಣ ಮಂಟಪ ಎನಿಸಿಕೊಳ್ಳಲಿದ್ದು, ಒಟ್ಟು ಮೂರು ಅಂತಸ್ತಿನ ಬೃಹತ್ ಕಟ್ಟಡ ಎನಿಸಿಕೊಳ್ಳಲಿದೆ. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು ₹1 ಕೋಟಿ ಹಣ ದಾನಿಗಳ ಹಾಗೂ ಸರ್ಕಾರದಿಂದ ಹರಿದು ಬಂದಿದೆ. ಮುಖ್ಯಮಂತ್ರಿ ನಿಧಿಯಿಂದ ₹25 ಲಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಬಿ ಶಾಣಪ್ಪ ₹25 ಲಕ್ಷ ನೀಡಿದ್ದಾರೆ.

ಕಲಬುರ್ಗಿಯ ಶ್ರೀಗುರು ವಿದ್ಯಾಪೀಠದ ಬಸವರಾಜ ಡಿಗ್ಗಾಗಿ ಅವರು ಸುಮಾರು ₹11 ಲಕ್ಷ ವೆಚ್ಚದ ಕಬ್ಬಿಣದ ರಾಡ್ ನೀಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ದೇವರಾಯ ನಾಡೆಪಲ್ಲಿ ₹50 ಸಾವಿರ, ವೀರಶೈವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ₹50 ಸಾವಿರ ನೀಡಿದ್ದಾರೆ. ಅಲ್ಲದೆ ಸಂಸದ ಬಸವರಾಜ ಪಾಟೀಲ ಸೇಡಂ ಅವರು ಕಟ್ಟಡಕ್ಕೆ ಬೇಕಾದ ಕಿಟಕಿ, ಬಾಗಿಲು ಸೇರಿದಂತೆ ಇನ್ನಿತರ ಸುಮಾರು ₹2 ರಿಂದ 3 ಲಕ್ಷದ ಸಾಮಾಗ್ರಿಗಳನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶಿವಯ್ಯಸ್ವಾಮಿ ಬಿಬ್ಬಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸುಮಾರು 3 ಅಂತಸ್ತಿನ ಕಟ್ಟಡದಲ್ಲಿ ನೆಲ ಅಂತಸ್ತಿನಲ್ಲಿ ಸುಮಾರು 43 ಕಲಂಗಳನ್ನು ಹಾಕಲಾಗಿದೆ. ನೆಲ ಅಂತಸ್ತಿನಲ್ಲಿ ಸುಮಾರು 1100 ಜನ ಒಂದೇ ಬಾರಿ ಕುಳಿತು ಊಟ ಮಾಡುವ ಸಭಾಂಗಣ, ಎರಡನೇ ಅಂತಸ್ತು ಸಭಾಂಗಣ ಮತ್ತು ಮೂರನೇ ಅಂತಸ್ತು ವಸತಿ ಕೋಣೆಗಳನ್ನು ನಿರ್ಮಿಸುವ ಯೋಜನೆ ಇದೆ’ ಎಂದು ಟ್ರಸ್ಟನ ಉಪಾಧ್ಯಕ್ಷ ಶರಣಪ್ಪ ಪಾಟೀಲ ತೆಲ್ಕೂರ ಮತ್ತು ವೀರಶೈವ ಮಹಾಸಭಾದ ಅಧ್ಯಕ್ಷ ಶರಣಬಸ್ಸಪ್ಪ ಹಾಗರಗಿ ತಿಳಿಸುತ್ತಾರೆ.

ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದ ಯಾವುದೇ ಕಲ್ಯಾಣ ಮಂಟಪ ಇರಲಿಲ್ಲ. ಸಮಾಜದ ಸರ್ವರ ಸಹಕಾರದಿಂದ ಕಲ್ಯಾಣ ಮಂಟಪ ನಿರ್ಮಿಸಿ ಅನುಕೂಲ ಕಲ್ಪಿಸುವ ಕೆಲಸ ಮಾಡಲಾಗುತ್ತದೆ.
ಶಿವಯ್ಯಸ್ವಾಮಿ ಬಿಬ್ಬಳ್ಳಿ
ಅಧ್ಯಕ್ಷರು, ವೀರಶೈವ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.