ಕಲಬುರಗಿ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸದಾಗಿ ಏಳು ‘ನಮ್ಮ ಕ್ಲಿನಿಕ್’ಗಳನ್ನು ಜಿಲ್ಲೆಗೆ ಮಂಜೂರು ಮಾಡಿದೆ. ಅವುಗಳಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಥಳವನ್ನೂ ಗುರುತಿಸಿದ್ದಾರೆ.
ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಶ್ರೀರಾಮ ನಗರ, ಸಂತ್ರಾಸವಾಡಿಯ ನಯಾ ಮೊಹಲ್ಲಾ, ಕಪನೂರ ಕೈಗಾರಿಕೆ ಪ್ರದೇಶ, ರಾಮಜಿ ನಗರ, ರಾಜಾಪೂರ, ಕೋಟನೂರ ಹಾಗೂ ಬಂಬೂ ಬಜಾರ್ ಸೇರಿ 7 ಹಾಗೂ ಗ್ರಾಮೀಣ ಭಾಗದ ಚಿಂಚೋಳಿ, ಶಹಾಬಾದ್, ಜೇವರ್ಗಿ ಮತ್ತು ಅಫಜಲಪುರದ 4 ಸೇರಿ ಒಟ್ಟು 11 ‘ನಮ್ಮ ಕ್ಲಿನಿಕ್’ಗಳು ಕಾರ್ಯನಿರ್ವಹಿಸುತ್ತಿವೆ. ಮುಂದೆ ಅವುಗಳ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ.
ಹೊಸದಾಗಿ ಮಂಜೂರಾದ ‘ನಮ್ಮ ಕ್ಲಿನಿಕ್’ಗಳಿಗೆ ಕೊಳಗೇರಿ, ಜನ ದಟ್ಟಣೆಯ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕಾಳಗಿಯ ಬಸವೇಶ್ವರ ವೃತ್ತ ಸಮೀಪದ ಪಟ್ಟಣ ಪಂಚಾಯಿತಿಗೆ ಸೇರಿದ ಕಟ್ಟಡ, ಕಮಲಾಪುರ ಪಟ್ಟಣ ಪಂಚಾಯಿತಿ ಪಕ್ಕದ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಯಡ್ರಾಮಿ ಪಟ್ಟಣದ ಹಳೆ ಬಜಾರ್‌ನ ಬಾಡಿಗೆ ಕಟ್ಟಡವನ್ನು ‘ನಮ್ಮ ಕ್ಲಿನಿಕ್’ಗಾಗಿ ನಿಗದಿಪಡಿಸಲಾಗಿದೆ.
ನಗರ ಪ್ರದೇಶದ ಮೋಮಿನಪುರದಲ್ಲಿ ಮಸೀದಿ ಪಕ್ಕದ ಬಾಡಿಗೆ ಕಟ್ಟಡ, ಖಾಜಾ ಕಾಲೊನಿಯ ಸರ್ಕಾರಿ ಶಾಲಾ ಕಟ್ಟಡ, ಜೀಲಾನಾಬಾದ್‌ನ ಬಾಡಿಗೆ ಕಟ್ಟಡ ಮತ್ತು ನಾಗನಹಳ್ಳಿಯಲ್ಲಿ ಪೊಲೀಸ್ ತರಬೇತಿ ಕೇಂದ್ರದ ಕಟ್ಟಡದಲ್ಲಿ ಹೊಸ ಕ್ಲಿನಿಕ್‌ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ.
‘ಮೂರು ತಿಂಗಳ ಹಿಂದೆಯೇ ಹೊಸದಾಗಿ ಮಂಜೂರಾದ ಏಳು ಕ್ಲಿನಿಕ್‌ಗಳಿಗೆ ಈಗಾಗಲೇ ಸ್ಥಳಗಳನ್ನು ಗುರುತಿಸಿ, ಅವುಗಳ ಮಾಹಿತಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಅಗತ್ಯ ಸೌಕರ್ಯಗಳೊಂದಿಗೆ ಕಾರ್ಯಾರಂಭ ಮಾಡಲಿವೆ’ ಎಂದು ‘ನಮ್ಮ ಕ್ಲಿನಿಕ್’ ನಗರ ಯೋಜನೆಯ ಶ್ರೀಕಾಂತಸ್ವಾಮಿ ಮಾಹಿತಿ ನೀಡಿದರು.
ವೈದ್ಯರ ಕೊರತೆ ಇಲ್ಲ: ‘ನಗರದಲ್ಲಿ ಕೆಬಿಎನ್, ಎಂಆರ್‌ಎಂಸಿ, ಜಿಮ್ಸ್ ಮತ್ತು ಇಎಸ್‌ಐ ವೈದ್ಯಕೀಯ ಕಾಲೇಜುಗಳು ಇರುವುದರಿಂದ ‘ನಮ್ಮ ಕ್ಲಿನಿಕ್’ಗಳಿಗೆ ಎಂಬಿಬಿಎಸ್ ಪದವೀಧರರ ಕೊರತೆ ಕಾಡುತ್ತಿಲ್ಲ. ವೈದ್ಯಕೀಯ ಸ್ನಾತಕೋತ್ತರ ಅಭ್ಯಸಿಸುವ ಮುನ್ನ ಹಲವರು ಒಂದು ವರ್ಷ ‘ನಮ್ಮ ಕ್ಲಿನಿಕ್’ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎನ್ನುತ್ತಾರೆ ಶ್ರೀಕಾಂತಸ್ವಾಮಿ.
‘ಪ್ರತಿ ಕ್ಲಿನಿಕ್‌ನಲ್ಲಿ ತಲಾ ಒಬ್ಬ ಎಂಬಿಬಿಎಸ್ ವೈದ್ಯ, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು ಹಾಗೂ ‘ಡಿ’ ದರ್ಜೆಯ ಸಿಬ್ಬಂದಿ ಇದ್ದಾರೆ. ಜೇವರ್ಗಿ, ಚಿಂಚೋಳಿಯಂತಹ ಗ್ರಾಮೀಣ ಭಾಗದಲ್ಲಿ ಕೆಲವು ತಿಂಗಳ ಹಿಂದೆ ವೈದ್ಯರ ಕೊರತೆ ಇತ್ತು, ಈಗ ಇಲ್ಲ. ಶುಶ್ರೂಷಕರು, ತಂತ್ರಜ್ಞರು, ‘ಡಿ’ ಗ್ರೂಪ್ ನೌಕರರನ್ನು ಸ್ಥಳೀಯವಾಗಿ ನೇಮಿಸಿಕೊಳ್ಳುತ್ತಿದ್ದೇವೆ. ಹೀಗಾಗಿ, ಅನ್ಯ ಜಿಲ್ಲೆಗಳಂತೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿಲ್ಲ’ ಎಂದರು.
‘ಜನದಟ್ಟಣೆ ಪ್ರದೇಶಗಳ ಆಯ್ಕೆ’
‘ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಜನ ದಟ್ಟಣೆಯ ಬಹು ಅಗತ್ಯವಾದ ಪ್ರದೇಶಗಳನ್ನು ‘ನಮ್ಮ ಕ್ಲಿನಿಕ್’ಗಳಿಗೆ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಿರುವ ಕ್ಲಿನಿಕ್‌ಗಳ ಜತೆಗೆ ಹೆಚ್ಚುವರಿ ಕ್ಲಿನಿಕ್‌ಗಳನ್ನು ರೋಗಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತೆಗೆದುಕೊಂಡು ಹೋಗಲಾಗುವುದು. ಸಕಾಲಕ್ಕೆ ರೋಗಿಗಳಿಗೆ ಅಗತ್ಯವಾದಷ್ಟು ಔಷಧಿಗಳನ್ನು ಜಿಲ್ಲಾ ಔಷಧಿ ಉಗ್ರಾಣದಿಂದ ಸರಬರಾಜು ಮಾಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಔಷಧಿ ಕಡಿಮೆಯಾದರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆಯುವ ಅವಕಾಶವನ್ನು ವೈದ್ಯಾಧಿಕಾರಿಗಳಿಗೆ ಕಲ್ಪಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.