ADVERTISEMENT

ಕೊಲೆ ಪ್ರಕರಣ: 9 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 4:54 IST
Last Updated 8 ನವೆಂಬರ್ 2020, 4:54 IST

ಕಲಬುರ್ಗಿ: ನಗರದಲ್ಲಿ ಪ್ರತ್ಯೇಕ ಕಡೆ ನಡೆದ ಎರಡು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.‌

ಇಲ್ಲಿನ ಕೈಲಾಸ ನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.‌ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದವರಾದ ಶರಣಬಸಪ್ಪ ಅಲಿಯಾಸ್‌ ಶರಣು ಮಾದಗುಂಡ, ಯೋಗಿನಾಥ ಮಾದಗುಂಡ, ಸಾಯಿನಾಥ ಮಾದಗುಂಡ ಹಾಗೂ ಅಶೋಕ ರಾಜಾಪುರ ಬಂಧಿತ ಆರೋಪಿಗಳು. ಕಡಗಂಚಿ ಗ್ರಾಮ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಭೋಗಶೆಟ್ಟಿ ಎನ್ನುವವರನ್ನು ನಗರದಲ್ಲಿ ಈಚೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಹೊಲ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಮೃತನ ಕುಟುಂಬದವರು ನೀಡಿದ ದೂರು ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌

‌ಆರ್.ಜಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಸ್ನೇಹಿತನ ಕೊಲೆ: ಐವರ ಬಂಧನ

ಕಲಬುರ್ಗಿ: ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕಟ್ಟಡದಿಂದ ಕೆಡವಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಐವರು ಗೆಳೆಯರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಶಾಬಾಸ್, ಸೋಹೆಲ್, ನದೀಮ್, ಜುಬೇರ್ ಹಾಗೂ ಸಮೀರ್ ಬಂಧಿತ ಆರೋಪಿಗಳು. ಕಲಬುರ್ಗಿಯ ಎಂ.ಜಿ. ರಸ್ತೆಯಲ್ಲಿ ಅಕ್ಟೋಬರ್ 9ರಂದು ಸಲಾಂ ದಸ್ತಗೀರ್‌ ಎಂಬ ವಿದ್ಯಾರ್ಥಿ ಕೊಲೆ ನಡೆದಿತ್ತು. ಅದರಲ್ಲಿ ಈ ಐವರೂ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದಸ್ತಗೀರ್‌ನಲ್ಲಿ ಮದ್ಯಪಾನ ಸೇವನೆಗೆ ಕರೆದುಕೊಂಡು ಹೋದ ಗೆಳೆಯರು ಪಾರ್ಟಿ ಮಾಡಿದ್ದರು. ನಂತರ ಗೆಳೆಯರ ಮಧ್ಯೆ ಜಗಳ ನಡೆದಿದ್ದು. ನಿರ್ಮಾಣ ಹಂತದಲ್ಲಿ ಕಟ್ಟಡದ ಮೇಲಿಂದ ದಸ್ತಗೀರ್‌ನನ್ನು ತಳ್ಳಿದ್ದರು. ಕುಡಿದ ಅಮಲಿನಲ್ಲಿ ಇದ್ದ ವಿದ್ಯಾರ್ಥಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಡಿಸಿಪಿ ಕಿಶೋರ ಬಾಬು ತಿಳಿಸಿದ್ದಾರೆ.

ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.