ADVERTISEMENT

ಕಲಬುರಗಿ | ಬಿಸಿಲಿನ ಝಳಕ್ಕೆ ತತ್ತರಿಸಿದ ಬಾಳೆ

ಬಟ್ಟೆ ಕಟ್ಟಿ ಬೆಳೆ ರಕ್ಷಣೆ; ದೂರದಿಂದ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 4:59 IST
Last Updated 16 ಏಪ್ರಿಲ್ 2024, 4:59 IST
ಟ್ಯಾಂಕರ್‌ ಮೂಲಕ ಕೃಷಿ ಹೊಂಡಕ್ಕೆ ನೀರು ಹರಿಸುತ್ತಿರುವ ರೈತರು
ಟ್ಯಾಂಕರ್‌ ಮೂಲಕ ಕೃಷಿ ಹೊಂಡಕ್ಕೆ ನೀರು ಹರಿಸುತ್ತಿರುವ ರೈತರು   

ಕಲಬುರಗಿ: ಹೆಚ್ಚಿದ ಬಿಸಿಲು, ಬಿಸಿಗಾಳಿ, ನೀರಿನ ಅಭಾವ... ಈ ಪ್ರಕೃತಿ ವೈಪರೀತ್ಯಗಳು ರೈತರಲ್ಲಿ ಆತಂಕ ಹೆಚ್ಚಿಸಿವೆ.

ಅಫಜಲಪುರ ತಾಲ್ಲೂಕಿನ ರೇವೂರ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಇಷ್ಟು ಸಮಸ್ಯೆಗಳ ನಡುವೆಯೂ ಏಳು ತಿಂಗಳಿಂದ ಶ್ರಮ ವಹಿಸಿ ಬೆಳೆ ಬೆಳೆದ ಬಾಳೆ ಸದ್ಯ ಗೊನೆ ಹಾಕುತ್ತಿವೆ. ಈ ಸಮಯದಲ್ಲಿ ಅಧಿಕ ನೀರು ಬೇಕು. ಮಳೆ ಕೊರತೆಯಿಂದ ಕಬ್ಬು, ಲಿಂಬೆ, ಕಲ್ಲಂಗಡಿ, ತರಕಾರಿ ಬೆಳೆಯಲು ಸಹ ನೀರಿನ ಕೊರತೆ ಎದುರಾಗಿದೆ.

‘ನೀನು ನನ್ನ (ಬಾಳೆ) ನೀರಿನಲ್ಲಿ ನಿಲ್ಲಿಸಿದರೆ ನಾನು ನಿನ್ನ ಊರಿನಲ್ಲಿ ನಿಲ್ಲಿಸುತ್ತೆನೆ’ ಎನ್ನುವ ಮಾತೊಂದು ಇತ್ತು. ಆದರೆ ಈ ವರ್ಷ ಬಹುತೇಕ ಜಲಮೂಲಗಳು ಬತ್ತಿವೆ. ಅಂತರ್ಜಲಮಮಟ್ಟವೂ ಕುಸಿದಿದೆ. ಬರಕ್ಕೆ ಸವಾಲು ಎನ್ನುವಂತೆ ರೈತರು ತಮ್ಮ ಬೆಳೆಯನ್ನು ಬಿಸಿಲಿನ ಝಳದಿಂದ ರಕ್ಷಿಸಲು ಜಮೀನಿನ ಸುತ್ತ ಶೆಡ್‌ನೆಟ್ (ಹಸಿರು ಬಣ್ಣದ ಬಟ್ಟೆ) ಸುತ್ತಿದ್ದಾರೆ. ಅಲ್ಲದೆ ಬೇರೆ ರೈತರ ಹೊಲಗಳಿಗೆ ನೀರು ಪಡೆದು ತಮ್ಮ ಬೆಳೆಗೆ ಹಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ADVERTISEMENT
ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ. ಇಷ್ಟಾದರೂ ಮುಂದೆ ಫಸಲಿಗೆ ಬೆಲೆ ಸಿಗುತ್ತದೆ ಎನ್ನವ ಯಾವ ನಂಬಿಕೆಯೂ ಇಲ್ಲ. ಎಲ್ಲ ದೇವರ ಆಟ.
ಶಂಕರರಾವ ಭಾಮಣಿ ಪಾಟೀಲ, ರೇವೂರ ರೈತ

ಕೆಲ ರೈತರು ಎರಡು ತಿಂಗಳಿಂದ ತಮ್ಮ ಕೃಷಿ ಹೊಂಡಕ್ಕೆ ಪ್ಲಾಸ್ಟಿಕ್ ಹಾಕಿ ನೀರು ತುಂಬಿಸಿ ಮೋಟರ್ ಮೂಲಕ ಬೆಳೆಗೆ ಹರಿಸುತ್ತಿದ್ದಾರೆ. 2.5 ಕಿ.ಮೀ ದೂರದಿಂದ ನಿತ್ಯ 4 ಸಾವಿರ ಲೀಟರ್ ಸಾಮರ್ಥ್ಯದ 11ರಿಂದ 12 ಟ್ಯಾಂಕರ್ ನೀರು ಖರೀದಿ ಮಾಡಿ ಹರಿಸುತ್ತಿದ್ದರೆ. ಬೆಳೆ ರಕ್ಷಿಸಲು ಇನ್ನೂ ಎರಡು ತಿಂಗಳು ಇದೇ ರೀತಿ ಮಾಡುವ ಅನಿವಾರ್ಯತೆ ರೈತರಿಗೆ ಎದುರಾಗಿದೆ.

ಕೊಳವೆ ಬಾವಿಗಳು ದಿನಕ್ಕೆ ಒಂದು ಗಂಟೆ ಮಾತ್ರ ನೀರು ಎತ್ತಿ ಬಳಿಕ ಬಂದ್‌ ಆಗುತ್ತಿದ್ದು ಬೋರ್‌ವೆಲ್ ಹಾಕಿಸಿದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ‘ನಮ್ಮ ಜಮೀನಿನಲ್ಲಿರುವ ನಾಲ್ಕು ಕೊಳವೆಬಾವಿಗಳ ನೀರನ್ನು ಕೃಷಿ ಹೊಂಡದಲ್ಲಿ ಶೇಖರಣೆ ಮಾಡಿ ಅಲ್ಲಿಂದ ಹನಿ ನೀರಾವರಿ ಮೂಲಕ ಗಿಡಗಳಿಗೆ ಹರಿಸುತ್ತೇವೆ. ಒತ್ತಡ ಹೆಚ್ಚಿರುವುದರಿಂದ ಕೊನೆಯ ಗಿಡದವರೆಗೂ ನೀರು ತಲುಪುತ್ತದೆ’ ಎನ್ನುತ್ತಾರೆ ರೈತ ರಾಜೇಂದ್ರ.

ಝಳದಿಂದ ಬೆಳೆ ರಕ್ಷಣೆಗೆ ಸೆಡ್‌ನೆಟ್ ( ಹಸಿರು ಬಣ್ಣದ ಬಟ್ಟೆ) ಸುತ್ತಿದ್ದೇವೆ. ಸಾಮಾನ್ಯ ಖರ್ಚಿನ ಜತೆ ಇದೂ ಹೊರೆಯಾಗಿದೆ. ಬೇರೆಯವರ ರೈತ ಹೊಲದಿಂದ ನೀರು ಪಡೆದಿದ್ದೇನೆ.
ಸಿದ್ಧರಾಮ, ರೈತ

‘ಮಳೆ ಕೊರತೆಯಾಗುತ್ತದೆ ಎನ್ನುವುದನ್ನು ಮೊದಲೇ ತಿಳಿದು ಬಾಳೆ ಎಲೆ ಕತ್ತರಿಸಿ ಗಿಡಗಳ ನಡುವೆ ಹಾಕಿದ್ದೇವೆ. ಗಾಳಿ ನೇರವಾಗಿ ಭೂಮಿಗೆ ತಾಗುವುದಿಲ್ಲ. ನೀರು ಬಿಟ್ಟರೆ ತೇವಾಂಶ ಬೇಗ ಆರುವುದಿಲ್ಲ. ಅಲ್ಲದೇ ಅದು ಕೊಳೆತು ಗೊಬ್ಬರವಾಗುತ್ತದೆ’ ಎಂದು ರೈತ ಲಕ್ಷ್ಮಿಪುತ್ರ ಚಲಗೇರಿ ತಿಳಿಸಿದರು.

‘2.5 ಎಕರೆ ಜಮೀನಿನಲ್ಲಿ 3 ಸಾವಿರ ಬಾಳೆ ನಾಟಿ ಮಾಡಿದ್ದೇವೆ. ತಿಂಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. 2 ಕೊಳವೆಬಾವಿಗಳನ್ನು 300 ಅಡಿ ಕೊರೆದರೂ ಹನಿ ನೀರು ಬಂದಿಲ್ಲ’ ಎಂದು ರೈತ ಶಂಕರರಾವ ಗೋಳು ತೋಡಿಕೊಂಡರು.

ಶೆಡ್‌ ನೆಟ್ ಕಟ್ಟಿ ಬಾಳೆ ಬೆಳೆ ರಕ್ಷಣೆಗೆ ಮುಂದಾದ ರೈತರು
ಶಂಕರರಾವ ಭಾಮಣಿ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.