
ಕಲಬುರಗಿ: ‘ವಿಕಸಿತ ಭಾರತ ಕನಸು ಸಾಕಾರಗೊಳಿಸಲು ದೇಶವನ್ನು ಆತ್ಮನಿರ್ಭರ ಭಾರತ ಮಾಡುವುದು ಅಗತ್ಯ. ಈ ನಿಟ್ಟಿನಲ್ಲಿ ಸ್ವದೇಶಿ ವಸ್ತುಗಳ ಬಳಕೆ ಯುವಜನರ ಬದುಕಿನ ಭಾಗವಾಗಬೇಕು’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಶಿವಕುಮಾರ ಎಂ.ಬೆಳ್ಳಿ ಪ್ರತಿಪಾದಿಸಿದರು.
ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ‘ಯುವ ಸಮ್ಮೇಳನ’ದಲ್ಲಿ ಅವರು ಉಪನ್ಯಾಸ ನೀಡಿದರು.
‘ಆತ್ಮನಿರ್ಭರ ಭಾರತ ನಮ್ಮ ದೇಶಕ್ಕೆ ಹೊಸ ಪರಿಕಲ್ಪನೆಯಲ್ಲ. ಹಿಂದೆ ನಮ್ಮ ಹಳ್ಳಿಗಳು ಸ್ವಾವಲಂಬಿಗಳಾಗಿದ್ದವು. ಹಾಲು–ಮೊಸರು, ದವಸ–ಧಾನ್ಯ, ಬಟ್ಟೆ–ಬರೆ ಎಲ್ಲವೂ ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತಿದ್ದವು. ಬರಬರುತ್ತ ನಾವೆಲ್ಲ ಪರಾವಲಂಬಿಗಳಾಗುತ್ತ ಬಂದೆವು. ಅವುಗಳ ಪರಿಣಾಮ ಆರೋಗ್ಯ, ಸಮಾಜ, ಅರ್ಥವ್ಯವಸ್ಥೆ ಸೇರಿದಂತೆ ಇಡೀ ದೇಶದ ಮೇಲಾಯಿತು’ ಎಂದರು.
‘ಮತ್ತೆ ಸ್ವಾವಲಂಬಿ ಭಾರತ ನಿರ್ಮಿಸಲು 2020ರ ಮೇನಲ್ಲಿ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಉಪಕ್ರಮ ಘೋಷಿಸಿತು. ದೇಶದ ಆರ್ಥಿಕ ಪ್ರಗತಿ, ಆಧುನಿಕತೆಗೆ ತಕ್ಕಂತೆ ಮೂಲಸೌಕರ್ಯಗಳ ನಿರ್ಮಾಣ, ತಂತ್ರಜ್ಞಾನ ಚಾಲಿತ ವ್ಯವಸ್ಥೆ ರೂಪಿಸುವುದು, ದೇಶದಲ್ಲಿ ಪ್ರಮಾಣದಲ್ಲಿರುವ ಯುವಜನರ ಶಕ್ತಿಯನ್ನು ಆಸ್ತಿಯಾಗಿ ಬಳಸಿಕೊಳ್ಳುವುದು ಹಾಗೂ ದೇಶದೊಳಗೆ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಈ ಉಪಕ್ರಮವು ಒಳಗೊಂಡಿದೆ’ ಎಂದು ಹೇಳಿದರು.
‘ಆತ್ಮನಿರ್ಭರ ಭಾರತ ಎಂಬುದು ಸದ್ಯದ ಮಟ್ಟಿಗೆ ತತ್ವವೂ (ಫಿಲಾಸಪಿ) ಹೌದು, ನೀತಿಯೂ (ಪಾಲಿಸಿ) ಹೌದು. ಅದರಡಿ ದೇಶವು ಪ್ರಗತಿಪಥದಲ್ಲಿ ಸಾಧನೆಗಳ ಮೈಲಿಗಲ್ಲು ಸೃಷ್ಟಿಸುತ್ತಿದೆ. ದೇಶದಲ್ಲಿ 2014ಕ್ಕೆ ಹೋಲಿಸಿದರೆ ಬಂಡವಾಳ ವೆಚ್ಚ ಸದ್ಯ ಐದು ಪಟ್ಟು ಹೆಚ್ಚಿದೆ. 23ಕ್ಕೂ ನಗರಗಳಲ್ಲಿ 1,000 ಕಿಮೀ ಮೆಟ್ರೊ ಮಾರ್ಗ ಅಭಿವೃದ್ಧಿಯಾಗಿದೆ. ಬಂದರುಗಳು ಸುಧಾರಣೆ ಕಂಡಿವೆ. ಹಡುಗುಗಳು ಬಂದರು ಬಳಕೆ ಸಮಯ ಅರ್ಧದಷ್ಟು ತಗ್ಗಿದೆ. ಶೇ10ರಷ್ಟು ವಿದ್ಯುತ್ ಅನ್ನು ನವೀಕರಿಸಬಲ್ಲ ಮೂಲಗಳಿಂದ ಉತ್ಪಾದಿಸಲಾಗುತ್ತಿದೆ’ ಎಂದರು.
‘ಆತ್ಮನಿರ್ಭರ ಭಾರತ ಸಾಕಾರಕ್ಕೆ ನಾವೆಲ್ಲ ಉಡುಗೆ–ತೊಡುಗೆ, ತಿಂಡಿ–ತಿನಿಸುಗಳಲ್ಲಿ ಸ್ವದೇಶಿ ನಿರ್ಮಿತ ವಸ್ತು–ಉತ್ಪನ್ನಗಳನ್ನು ಬಳಸಬೇಕು. ಬರೀ ಆಧುನಿಕ ಶಿಕ್ಷಣವು ನಿರುದ್ಯೋಗವನ್ನು ಸೃಷ್ಟಿಸುತ್ತಿದ್ದು, ಅದರ ಬದಲು ಕೌಶಲಗಳಿಗೆ ಒತ್ತು ನೀಡಬೇಕು. ಡಿಜಿಟಲ್ ಕೌಶಲ, ಭಾಷಾ ಕೌಶಲ ಕಲಿಯಬೇಕು. ಜೊತೆಗೆ ಉದ್ಯೋಗಶೀಲತೆ ರೂಢಿಸಿಕೊಳ್ಳಬೇಕು’ ಎಂದು ಯುವ ಜನರಿಗೆ ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿಯಾನದ ಜಿಲ್ಲಾ ಸಂಚಾಲಕಿ ಶೋಭಾ ಬಾಣಿ, ‘ದೇಶವನ್ನು ಸ್ವಾವಲಂಬಿ ಮಾಡಲು ಯುವಜನರು ಸ್ವದೇಶಿ, ಸ್ವಭಾಷಾ, ಸ್ವಭೂಷಣಗಳನ್ನು ಬದುಕಿನ ಮಂತ್ರಗಳಾಗಿ ಅಳವಡಿಸಿಕೊಳ್ಳಬೇಕು. ಮಹಾತ್ಮ ಗಾಂಧಿ ಸೇರಿದಂತೆ ಕಾಲಕಾಲಕ್ಕೆ ಅನೇಕ ಮಹನೀಯರು ‘ಸ್ವದೇಶಿ’ ಬಗೆಗೆ ಮಾತನಾಡಿದ್ದಾರೆ. ಇದೀಗ ನರೇಂದ್ರ ಮೋದಿ ಅದನ್ನು ಉಪಕ್ರಮವಾಗಿ ಜಾರಿಗೊಳಿಸುತ್ತಿದ್ದಾರೆ. ಆತ್ಮನಿರ್ಭರ ಭಾರತದ ಪರಿಕಲ್ಪನೆ, ಉದ್ದೇಶಗಳು ನಗರದಿಂದ ಮಂಡಲ, ಹಳ್ಳಿಗಳನ್ನೂ ತಲುಪಬೇಕಿದೆ’ ಎಂದರು.
ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾರತ ಮಾತೆ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟ ಘಟನೆಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮಾಜಿ ಸದಸ್ಯ ಅಮರನಾಥ ಪಾಟೀಲ, ಅಭಿಯಾನದ ರಾಜ್ಯ ಸಹ ಸಂಚಾಲಕಿ ಶಶಕಿಕಲಾ ಟೆಂಗಳಿ, ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ, ಶಿವಯೋಗಿ ನಾಗನಹಳ್ಳಿ, ಮಹೇಶ ಚೌಹಾಣ, ಗುಂಡಪ್ಪ, ಬೀರಣ್ಣ ಕಲ್ಲೂರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.