ADVERTISEMENT

ಲಂಚ: ಆಳಂದ ಬಿಇಒ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 13:04 IST
Last Updated 18 ಜೂನ್ 2020, 13:04 IST
ಈಶ್ವರಪ್ಪ
ಈಶ್ವರಪ್ಪ   

ಕಲಬುರ್ಗಿ:ಹೆರಿಗೆ ರಜೆಗೆ ತೆರಳಿದ್ದ ಸಹ ಶಿಕ್ಷಕಿಯೊಬ್ಬರನ್ನು ವಾಪಸ್ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲು ₹ 5 ಸಾವಿರ ಲಂಚ ಪಡೆಯುತ್ತಿದ್ದ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಈಶ್ವರಪ್ಪ ಭೀಮರಾಯ ಅವರ ಮನೆ ಮೇಲೆ ಗುರುವಾರ ದಾಳಿ ನಡೆಸಿ, ಹಣದ ಸಮೇತ ಬಂಧಿಸಲಾಗಿದೆ ಎಂದುಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮೂಲಗಳು ತಿಳಿಸಿವೆ.

ಬಿಇಒ ಈಶ್ವರಪ್ಪ ಹಾಗೂ ಲಂಚ ಪಡೆಯಲು ಸಹಕರಿಸಿದ ಆರೋಪದ ಮೇರೆಗೆ ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಶಶಿಕಾಂತ ಹುಡಗಿ ವಿರುದ್ಧವೂ ಎಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ: ‘ಆಳಂದ ತಾಲ್ಲೂಕಿನ ವೈಜಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯೊಬ್ಬರು 2019ರ ಅಕ್ಟೋಬರ್‌ನಲ್ಲಿ ರಜೆ ಪಡೆದುಕೊಂಡಿದ್ದರು. ಮತ್ತೆ ಕರ್ತವ್ಯಕ್ಕೆ ಮರಳುವ ಸಂಬಂಧ ಶಿಕ್ಷಕಿಯ ಪರವಾಗಿ ಅವರ ಪತಿ ರಾಜಕುಮಾರ ಕಾಂಬಳೆ, ಎಸ್‌ಡಿಎ ಶಶಿಕಾಂತ ಬಳಿ ವಿಚಾರಿಸಲು ತೆರಳಿದ್ದ ಸಂದರ್ಭದಲ್ಲಿ ₹ 5 ಸಾವಿರ ಹಣ ನೀಡಿದರೆ ಅನುಮತಿ ಸಿಗಲಿದೆ ಎಂದು ಸೂಚ್ಯವಾಗಿ ಹೇಳಿದ್ದರು. ಈ ಬಗ್ಗೆ ಕಾಂಬಳೆ ದೂರು ನೀಡಿದ್ದರು’ ಎಂದು ಎಸಿಬಿ ಮೂಲಗಳು ತಿಳಿಸಿವೆ.

ADVERTISEMENT

‘ಕಾಂಬಳೆ ಅವರಿಂದ ಲಂಚ ಪಡೆದುಕೊಂಡು ಅದನ್ನು ತಲುಪಿಸಲು ಬಿಇಒ ಅವರ ಮನೆಗೆ ತೆರಳಿದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಸುಧಾ ಆದಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.ಈಶ್ವರಪ್ಪ ಹಾಗೂ ಶಶಿಕಾಂತ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಈ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.