ವಾಡಿ: ಕಾರ್ಖಾನೆಯಿಂದ ಬೇರೆ ಬೇರೆ ಪ್ರದೇಶಗಳಿಗೆ ಸಿಮೆಂಟ್ ಸಾಗಿಸುವ ಲಾರಿಗಳ ಚಾಲಕರಿಗೆ ಅದಾನಿ ಒಡೆತನದ ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆ ಕನಿಷ್ಠ ಸೌಕರ್ಯ ನೀಡದೆ ವಂಚಿಸುತ್ತಿದೆ.
ದೇಶದ ಮೂಲೆ ಮೂಲೆಗಳಿಂದ ನಿತ್ಯ ಬರುವ ನೂರಾರು ಲಾರಿಗಳು ಕಂಪನಿ ಹೊರಾಂಗಣದ ಲಾರಿ ಯಾರ್ಡ್‌ನಲ್ಲಿ ತಂಗುತ್ತವೆ.
ಕಂಪನಿ ದ್ವಾರದ ಬಳಿ ಲಾರಿಗಳನ್ನು ನಿಲ್ಲಿಸಿ ಪಾಳಿಗಾಗಿ ಕಾಯುವ ಚಾಲಕರು ಕನಿಷ್ಠ ಸೌಕರ್ಯಗಳಿಲ್ಲದೆ ಒದ್ದಾಡುತ್ತಿದ್ದಾರೆ. ದೂಳು ಹೊತ್ತು ನಿಂತ ಬಯಲೇ ಅವರಿಗೆ ಗತಿಯಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಮುಳ್ಳುಕಂಟಿಗಳು ಹಾಗೂ ಹಾವು ಚೇಳುಗಳೇ ತುಂಬಿರುವ ಬಯಲ ಕಡೆ ಚೊಂಬು ಹಿಡಿದುಕೊಂಡು ಹೋಗುವ ಗತಿಯಿದೆ. ವಿಶ್ರಾಂತಿ ಗೃಹ ಇಲ್ಲದೇ ದಾರಿ ಪಕ್ಕದ ಶೆಡ್‌ನಲ್ಲಿ ಲಾರಿ ಟಾಪ್‌ಗಳ ಮೇಲೆ ಮಲಗುವುದು ಅನಿವಾರ್ಯವಾಗಿದೆ.
‘ಸ್ನಾನಕ್ಕೆ ವ್ಯವಸ್ಥೆಯಿಲ್ಲದೇ ದೂಳಿನ ಕಣಗಳ ಮಧ್ಯೆ ವಾರಗಟ್ಟಲೆ ಇರಬೇಕಾದ ಸ್ಥಿತಿ ಇದ್ದು ನಮ್ಮ ಕಷ್ಟ ಯಾವ ಶತ್ರುವಿಗೂ ಬೇಡ. ಲಾರಿ ನಿಲುಗಡೆ ಸ್ಥಳದಲ್ಲಿ ಯಾವುದೇ ಸುರಕ್ಷತೆಯಿಲ್ಲದ ಕಾರಣ ಕಳ್ಳರ ಹಾವಳಿ ಹೆಚ್ಚಾಗಿದೆ. ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ ಬಂದ್ ಆಗಿದೆ. ಸೊಳ್ಳೆ ಕಚ್ಚಿಸಿಕೊಂಡೇ ರಾತ್ರಿ ಕಳೆಯಬೇಕು. ಕಂಪನಿ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರುತ್ತಾರೆ ಚಾಲಕರು.
ಸುರಕ್ಷಾ ಕ್ಯಾಂಟೀನ್ ಪಕ್ಕ ಹಾಗೂ ಕಾರ್ಖಾನೆ ಮುಂಭಾಗ ನಿರ್ಮಿಸಿದ್ದ ವಿಶ್ರಾಂತಿ ಗೃಹ ಹಾಗೂ ಶೌಚಾಲಯವನ್ನು ನಿರ್ವಹಣೆ ಮಾಡದೇ ಬೀಗ ಹಾಕಲಾಗಿದ್ದು ಅನುತ್ಪಾದಕ ವಸ್ತು ತುಂಬಲಾಗಿದೆ.
ಸಾವಿರಾರು ಕಿ.ಮೀ. ದೂರದ ದಾರಿ ಕ್ರಮಿಸಿ ಸಿಮೆಂಟ್ ಸರಬರಾಜು ಮಾಡುವ ಲಾರಿ ಚಾಲಕರಿಗೆ ಉತ್ತಮ ಸೌಕರ್ಯ ಒದಗಿಸಬೇಕಾಗಿರುವುದು ಕಂಪನಿ ಕರ್ತವ್ಯವಾಗಿದ್ದು ಕೂಡಲೇ ಸೌಕರ್ಯ ಒದಗಿಸಬೇಕು ಎನ್ನುವುದು ಒತ್ತಾಯವಾಗಿದೆ.
ಸಿಮೆಂಟ್ ಸಾಗಿಸುವ ಲಾರಿ ಚಾಲಕರ ವಿಶ್ರಾಂತಿ ಗೃಹ ಹಾಗೂ ಶೌಚಾಲಯಗಳು ಬಂದ್ ಆಗಿವೆ. ಕಳ್ಳರ ಹಾವಳಿಯಿಂದ ಚಾಲಕರು ರೋಸಿ ಹೋಗಿದ್ದಾರೆ. ಆಡಳಿತ ಮಂಡಳಿ ಚಾಲಕರು ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕುರಾಜು ಕೋಲಿ ಪ್ರಧಾನ ಕಾರ್ಯದರ್ಶಿ ಲಾರಿ ಒಕ್ಕೂಟ ಮಾಲೀಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.