ADVERTISEMENT

ಕಲಬುರಗಿ | ಡಾ.ಅಜಯ್‌ ಸಿಂಗ್ ಕಾರಿಗೆ ಮುತ್ತಿಗೆ

ಮುತ್ತಕೋಡ ಗ್ರಾಮದ ಕೆರೆ ಒತ್ತುವರಿ ಆರೋಪ: 10 ದಿನಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 5:51 IST
Last Updated 18 ಜುಲೈ 2024, 5:51 IST
ಜೇವರ್ಗಿ ಪಟ್ಟಣದಲ್ಲಿ ಬುಧವಾರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾನಿರತರ ಮನವಿ ಆಲಿಸಿದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್
ಜೇವರ್ಗಿ ಪಟ್ಟಣದಲ್ಲಿ ಬುಧವಾರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾನಿರತರ ಮನವಿ ಆಲಿಸಿದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್   

ಕಲಬುರಗಿ: ಯಡ್ರಾಮಿ ತಾಲ್ಲೂಕಿನ ಮುತ್ತಕೋಡ ಗ್ರಾಮದಲ್ಲಿ ಈ ಹಿಂದೆ ಕೆರೆ ನಿರ್ಮಿಸಲು ಜಿಲ್ಲಾ ಪಂಚಾಯಿತಿಗೆ ಜಮೀನು ನೀಡಿದ್ದ ವ್ಯಕ್ತಿ ಮತ್ತು ಕೆಲ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೆರೆ ಜಮೀನು ಕಬಳಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವವರು ಬುಧವಾರ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್ ಅವರ ಕಾರಿಗೆ ಮುತ್ತಿಗೆ ಹಾಕಿದರು.

ಜೇವರ್ಗಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಣದ ರಸ್ತೆಯಲ್ಲಿ ಪ್ರತಿಭಟನಾಕಾರರು ಕಾರು ತಡೆಯುತ್ತಿದಂತೆ ಕೆಳಗೆ ಇಳಿದ ಡಾ.ಅಜಯ್‌ ಸಿಂಗ್, ಅವರ ಮನವಿ ಆಲಿಸಿದರು.

ಸಂಘಟನೆಯ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶಕುಮಾರ ರಾಠೋಡ ಮಾತನಾಡಿ, ‘ಮುತ್ತಕೋಡ ಗ್ರಾಮದ ಈ ಜಮೀನನನ್ನು ಸಾರ್ವಜನಿಕ ಕೆರೆಗಾಗಿ ಸಾರ್ವಜನಿಕರ ಸಮಕ್ಷಮದಲ್ಲಿ ಬರೆದು ಕೊಡಲಾಗಿತ್ತು. ಆ ಬಳಿಕ ಜಿ.ಪಂ. ₹10 ಲಕ್ಷ ಅನುದಾನದಲ್ಲಿ ಜಿನುಗು ಕೆರೆ ನಿರ್ಮಿಸಿತ್ತು. ಆ ಬಳಿಕ ಹಲವು ಬಾರಿ ಟೆಂಡರ್ ಕರೆದು ಕಾಮಗಾರಿಗಳನ್ನು ನಡೆಸಲಾಗಿದೆ. ಆದರೆ, ವಾಸ್ತವದಲ್ಲಿ ಆ ಜಮೀನು ಸರ್ಕಾರದ ಹೆಸರಿಗೆ ನೋಂದಣಿಯೇ ಆಗಿಲ್ಲ’ ಎಂದರು. 

ADVERTISEMENT

‘ಆ ಜಮೀನು ಅನ್ನು ಖಾಸಗಿ ವ್ಯಕ್ತಿಯೊಬ್ಬರು ಕೆಲವು ಅಧಿಕಾರಿಗಳ ನೆರವಿನಿಂದ ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ. ಕೆರೆಯಲ್ಲಿ ಹಲವು ಸರ್ಕಾರಿ ಕಾಮಗಾರಿಗಳು ಸಹ ನಡೆದಿವೆ. ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಹೋರಾಟಗಾರರ ಮನವಿ ಆಲಿಸಿದ ಬಳಿಕ ಶಾಸಕರು, ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ವಕೀಲ ಭೀಮಾಶಂಕರ ಮಾಡಿಯಾಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.