ಅಫಜಲಪುರ: ‘ಮತಕ್ಷೇತ್ರದ ಪರಹತಾಬಾದ್ ಗ್ರಾಮ ಪಂಚಾಯಿತಿಗೆ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 200 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಏಕಾಏಕಿ ಮಂಜೂರಾಗಿರುವ ಮನೆಗಳನ್ನು ಹೊನ್ನಕಿರಣಿಗಿ ಮತ್ತು ತಾಲ್ಲೂಕಿನ ಅತನೂರು ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಿದ್ದು ಯಾಕೆ ಎಂಬುವುದು ಗೊತ್ತಾಗುತ್ತಿಲ್ಲ. ಇದರಿಂದ ಮನೆರಹಿತ ಫಲಾನುಭವಿಗಳು ಕಷ್ಟ ಪಡುವಂತಾಗಿದೆ’ ಎಂದು ಜಯಕರ್ನಾಟಕ ವಲಯ ಘಟಕದ ಅಧ್ಯಕ್ಷ ಶಿವಕುಮಾರ್ ಶರ್ಮ ಹೇಳಿದರು.
ಈ ಕುರಿತು ಭಾನುವಾರ ಮಾತನಾಡಿ, ‘ಮನೆಗಳು ಯಾವ ಕಾರಣಕ್ಕೆ ಬೇರೆ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಲಾಗಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ನಾವು ಇದಕ್ಕಾಗಿ ಹಲವಾರು ಬಾರಿ ಹೋರಾಟ ಮಾಡಿದ್ದೇವೆ. ಶಾಸಕ ಎಂ.ವೈ.ಪಾಟೀಲ ಅವರು ಈಚೆಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಮನೆಗಳು ರದ್ದಾದ ಬಗ್ಗೆ ಕೇಳಿದರೆ ಯಾವುದೇ ಸಮರ್ಪಕ ಉತ್ತರ ನೀಡಲಿಲ್ಲ’ ಎಂದು ಅವರು ಹೇಳಿದರು.
‘ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ ದಲ್ಲಾಳಿಗಳು ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಪರಿಶೀಲನೆ ನಡೆಯಬೇಕು. ಸರ್ಕಾರ ವಸತಿ ರೈತರಿಗೆ ಉಚಿತವಾಗಿ ನೀಡುವ ಮನೆಗಳು ಮಾರಾಟ ಮಾಡಿದರೆ ಹೇಗೆ? ಹೀಗಾಗಿಯೇ ಬಡವರಿಗೆ ಮನೆಗಳು ದೊರೆಯುತ್ತಿಲ್ಲ’ ಎಂದು ಅವರು ಹೇಳಿದರು.
ಶಾಸಕರ ಶಿಫಾರಸ್ಸು ಪತ್ರವನ್ನು (ಲೆಟರ್ ಹೆಡ್) ತೆಗೆದುಕೊಂಡು ರಾಜಕೀಯ ಪುಡಾರಿಗಳು ವಸತಿ ನಿಗಮದಲ್ಲಿ ಹಣವನ್ನು ನೀಡಿ ಮನೆಗಳನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ಮನೆಗಳು ಹಣಕ್ಕಾಗಿ ಅನುಕೂಲಸ್ಥರಿಗೆ ಮಾರಾಟ ಮಾಡಲಾಗಿದೆ’ ಎಂದು ವಸತಿರಹಿತ ಫಲಾನುಭವಿಗಳು ದೂರಿದ್ದಾರೆ.
ತಾಲ್ಲೂಕಿನ ವಸತಿ ನೋಡಲ್ ಅಧಿಕಾರಿ ಆನಂದ್ ಮಾಹಿತಿ ನೀಡಿ ‘ತಾಲ್ಲೂಕಿಗೆ 2022-23ರ ಸಾಲಿನಲ್ಲಿ ಹೆಚ್ಚುವರಿ ಕೋಟಾದಲ್ಲಿ ಬಸವ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 2500 ಮನೆಗಳು ಮಂಜೂರಾಗಿವೆ. ಎರಡು ದಿನದ ಹಿಂದೆ ರೇವೂರು (ಬಿ) ಪಂಚಾಯಿತಿಗೆ 35 ಮನೆಗಳು ಮಂಜೂರಾಗಿವೆ. ಈಗಾಗಲೇ ಮನೆ ಹಂಚಿಕೆ ಮುಗಿದಿದೆ. ಕೆಲವು ಕಡೆ ಅನುಮೋದನೆಗಳಾಗಿವೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.