ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ: ಕ್ರಮಕ್ಕೆ ಎಐಡಿಎಸ್‌ಒ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:57 IST
Last Updated 29 ಮೇ 2022, 4:57 IST
ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಎಐಡಿಎಸ್‌ಒ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು- ಪ್ರಜಾವಾಣಿ ಚಿತ್ರ
ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಎಐಡಿಎಸ್‌ಒ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು- ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಕಾಂ 5ನೇ ಸೆಮಿಸ್ಟರ್‌ನಮ್ಯಾನೇಜ್‌ಮೆಂಟ್ ಅಕೌಂಟಿಂಗ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಜಿಲ್ಲಾ ಸಮಿತಿ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಮಿತಿಯ ಸದಸ್ಯ ವೆಂಕಟೇಶ ದೇವದುರ್ಗ ಮಾತನಾಡಿ, ‘ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವಲ್ಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ವಿಫಲವಾಗಿದೆ.ವಿಶ್ವವಿದ್ಯಾಲಯದ ಅಧೀನದ ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳ ಬದುಕು ಅತಂತ್ರಕ್ಕೆ ತಳ್ಳಲ್ಪಟ್ಟಿದೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರು’ ಎಂದು ದೂರಿದರು.

‘2020ರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆಗಳ ದಿನಾಂಕವನ್ನು ತಾಂತ್ರಿಕ ಕಾರಣಗಳ ನೆಪವೊಡ್ಡಿ ಮುಂದೂಡಲಾಗಿದೆ. ಇದು ಬೇಜವಾಬ್ದಾರಿತನದ ನಡೆ. ವಿದ್ಯಾರ್ಥಿಗಳ ಬಗೆಗಿನ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಒಂದೆಡೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಪದೇ ಪದೇ ಪರೀಕ್ಷೆಗಳ ಮುಂದೂಡಿಕೆ ಮಾಡುವ ಬದಲು ಪ್ರಶ್ನೆ ಪ್ರತಿಕೆ ಸೋರಿಕೆಯ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರನ್ನು ಶಿಕ್ಷಿಸಬೇಕು’ ಎಂದು ಅವರು ಒತ್ತಾಯಿಸಿದರು.‌‌

ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯದರ್ಶಿ ಎನ್‌.ಕೆ ತುಳಜರಾಮ, ಉಪಾದ್ಯಕ್ಷ ಸ್ನೇಹಾ ಕಟ್ಟಿಮನಿ, ಪ್ರೀತಿ ದೊಡ್ಡಮನಿ, ನಾಗರಾಜ, ಭೀಮು ಆಂದೋಲಾ, ಸಿದ್ದು ಮದ್ರಿ, ದತ್ತು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.