ADVERTISEMENT

ಕಲಬುರಗಿ | ಅಕ್ಷಯ ತೃತೀಯ: ಚಿನ್ನ ಖರೀದಿ ಸಂಭ್ರಮ

ಕಲ್ಯಾಣ ಕರ್ನಾಟಕದ ಬಿಸಿಲಿನಂತೆ ಏರುತ್ತಿರುವ ಚಿನ್ನದ ಬೆಲೆ: ಗ್ರಾಹಕರ ಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:45 IST
Last Updated 30 ಏಪ್ರಿಲ್ 2025, 15:45 IST
ಅಕ್ಷಯ ತೃತೀಯದ ಅಂಗವಾಗಿ ಕಲಬುರಗಿ ನಗರದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯಲ್ಲಿ ಆಭರಣ ಖರೀದಿಯಲ್ಲಿ ತೊಡಗಿರುವ ಜನ
ಅಕ್ಷಯ ತೃತೀಯದ ಅಂಗವಾಗಿ ಕಲಬುರಗಿ ನಗರದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯಲ್ಲಿ ಆಭರಣ ಖರೀದಿಯಲ್ಲಿ ತೊಡಗಿರುವ ಜನ   

ಕಲಬುರಗಿ: ಕಲ್ಯಾಣ ಕರ್ನಾಟಕದ ಬಿಸಿಲಿನಂತೆ ಚಿನ್ನದ ಬೆಲೆ ಏರುತ್ತಿದ್ದರೂ ಬಂಗಾರದ ಹಬ್ಬ ‘ಅಕ್ಷಯ ತೃತೀಯ’ದ ದಿನವಾದ ಬುಧವಾರ ಜನರು ಬಂಗಾರ ಹಾಗೂ ಬೆಳ್ಳಿ ಖರೀದಿಸಿದರು.

ಬಿರು ಬಿಸಿಲಿನ ನಡುವೆಯೂ ಸೂಪರ್ ಮಾರುಕಟ್ಟೆಯಲ್ಲಿರುವ ಸರಾಫ್ ಬಜಾರ್‌ನಲ್ಲಿಯ ಆಭರಣದ ಅಂಗಡಿಗಳಲ್ಲಿ ಮಹಿಳೆಯರು ಖರೀದಿಯಲ್ಲಿ ತೊಡಗಿದ್ದರು. ಕುಟುಂಬ ಸಮೇತರಾಗಿ ಬಂದ್ದಿದ್ದ ಅವರು ಆಭರಣ ಹಿಡಿದು ಅದರ ವಿನ್ಯಾಸ ನೋಡಿ ದರ ವಿಚಾರಿಸಿ ಚೌಕಾಸಿಯಲ್ಲಿ ತೊಡಗಿದ್ದರು. ಹಬ್ಬ, ಮದುವೆ ಹಾಗೂ ಇತರ ಶುಭ ಸಮಾರಂಭಗಳಿಗೆ ನಿಯಮಿತವಾಗಿ ಒಂದೇ ಅಂಗಡಿಯಲ್ಲಿ ಆಭರಣ ಖರೀದಿಸುವುದರಿಂದ ಅಂಗಡಿ ಮಾಲೀಕರೂ ಗ್ರಾಹಕರ ಚೌಕಾಸಿಗೆ ‘ಬೆಲೆ’ ಕೊಟ್ಟರು.

ನಗರದ ಕೆಬಿಎನ್‌ ಆಸ್ಪತ್ರೆ ಎದುರಿನ ಗೋಲ್ಡ್‌ ಹಬ್‌ನ ಅಂಗಡಿಗಳಲ್ಲಿಯೂ ಹೆಚ್ಚಿನ ಜನ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು. ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್, ತನಿಷ್ಕಾ ಮತ್ತು ಜಾಯ್‌ ಅಲುಕಾಸ್ ಸೇರಿದಂತೆ ವಿವಿಧ ಆಭರಣ ಮಳಿಗೆಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ಉಡುಗೊರೆ ಹಾಗೂ ರಿಯಾಯಿತಿ ಘೋಷಿಸಲಾಗಿತ್ತು.

ADVERTISEMENT

‘ಚಿನ್ನದ ಬೆಲೆ ಏರಿಕೆಯಾದ್ದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ಗ್ರಾಹಕರ ಸಂಖ್ಯೆ ತುಸು ಕಡಿಮೆಯಾಗಿದೆ. ಅಕ್ಷಯ ತೃತೀಯದ ದಿನ ಬಂಗಾರ ಖರೀದಿಸಿದರೆ ವರ್ಷವಿಡೀ ಸಂಪತ್ತು ಹುಡುಕಿ ಬರುತ್ತದೆ ಎನ್ನುವ ನಂಬಿಕೆ ಇರುವ ಕಾರಣಕ್ಕೆ ಕೆಲವರು ಬಂಗಾರ ಖರೀದಿಗೆ ಬರುತ್ತಾರೆ. ಅವರಲ್ಲಿಯೂ ಕೆಲವರು ಈ ವರ್ಷ ಖರೀದಿಗೆ ಬಂದಿಲ್ಲ’ ಎಂದು ಸರಾಫ್ ಬಜಾರ್‌ನ ಬಂಗಾರ ಮಾರಾಟ ಅಂಗಡಿಯ ಮಾಲೀಕರೊಬ್ಬರು ತಿಳಿಸಿದರು.

ಅಕ್ಷಯ ತೃತೀಯದ ಅಂಗವಾಗಿ ಕಲಬುರಗಿ ನಗರದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯಲ್ಲಿ ಆಭರಣ ಖರೀದಿಯಲ್ಲಿ ತೊಡಗಿರುವ ಜನ

22 ಕ್ಯಾರೆಟ್‌ನ 1 ಗ್ರಾಂ ಚಿನ್ನ ₹8980 ಕಲಬುರಗಿಯಲ್ಲಿ ಬುಧವಾರ 22 ಕ್ಯಾರೆಟ್‌ನ 1 ಗ್ರಾಂ ಚಿನ್ನವನ್ನು ₹8980 24 ಕ್ಯಾರೆಟ್‌ನ ಚಿನ್ನವನ್ನು ₹9787ಗೆ ಮಾರಾಟ ಮಾಡಲಾಯಿತು. 1 ಗ್ರಾಂ ಬೆಳ್ಳಿಯನ್ನು ₹100.40 ಹಾಗೂ 1 ಕೆ.ಜಿ ಬೆಳ್ಳಿಯನ್ನು ₹ 100400ಗೆ ಮಾರಾಟ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.