ADVERTISEMENT

ಇಬ್ರಾಹಿಮಪುರ ಮಠದ ಮಹಾಂತ ಸ್ವಾಮೀಜಿ ಲಿಂಗೈಕ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:50 IST
Last Updated 6 ಜೂನ್ 2025, 15:50 IST
 ಮಹಾಂತ ಸ್ವಾಮಿಜೀ 
 ಮಹಾಂತ ಸ್ವಾಮಿಜೀ    

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿ ಸಮೀಪದ ಇಬ್ರಾಹಿಮಪುರ ಮಹಾಂತೇಶ್ವರ ವಿರಕ್ತ ಮಠದ ಪೀಠಾಧಿಪತಿಗಳಾಗಿದ್ದ ಮಹಾಂತ ಸ್ವಾಮಿಗಳು(66) ಶುಕ್ರವಾರ ಮೃತಪಟ್ಟಿದ್ದಾರೆ.

ಸೋಲಾಪುರ ಆಸ್ಪತ್ರೆಯಲ್ಲಿ ಕಳೆದ ಎರಡು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಹಾರಾಷ್ಟ್ರದ ಅಕ್ಕಲಕೋಟ ತಾಲ್ಲೂಕಿನ ಇಬ್ರಾಹಿಮಪುರದಲ್ಲಿ ಮಠ ಇದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದಾರೆ. ಮಹಾಂತ ಸ್ವಾಮೀಜಿ ಮೂಲತಃ ಆಳಂದ ತಾಲ್ಲೂಕಿನ ನಿಂಬರಗಾ ಗ್ರಾಮದವರು. ತಂದೆ ಬಸಯ್ಯ ರುದ್ರಯ್ಯ ವಿರಕ್ತಮಠ, ತಾಯಿ ಮಹಾದೇವಿ.

ಮಹಾಂತ ಸ್ವಾಮಿಗಳು ಸದಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಶ್ರೀಗಳು ಪಾರ್ಶ್ವವಾಯು ರೋಗಿಗಳಿಗೆ ಸಂಜೀವಿನಿ ಹಾಗೆ ಇದ್ದರು. ಈ ಭಾಗದ ಸಾವಿರಾರು ರೋಗಿಗಳನ್ನು ಗುಣಪಡಿಸಿದ್ದರು. ಇಬ್ರಾಹಿಮಪುರ ಮಹಾಂತೇಶ್ವರ ಮಠಕ್ಕೆ ಮಾದನಹಿಪ್ಪರಗಿಯ ಲಿಂ.ಶಿವಲಿಂಗ ಶಿವಯೋಗಿಗಳ ನೇತೃತ್ವದಲ್ಲಿ 1976ರಲ್ಲಿ ಪೀಠಾರೋಹಣ ಮಾಡಿದರು.

ADVERTISEMENT

ಕಾಳಿಕಾ ದೇವಿಯ ಆರಾಧಕರಾಗಿದ್ದ ಶ್ರೀಗಳು ಮಾದನಹಿಪ್ಪರಗಿಯ ಉಪಗ್ರಾಮ ವಾಡಿಯಲ್ಲಿ ಎರಡು ದಶಕಗಳ ಹಿಂದೆ ಕಾಳಿಕಾದೇವಿ ಮಠ ಸ್ಥಾಪಿಸಿದರು. ಭಕ್ತರು ಮತ್ತು ಪಾರ್ಶ್ವುವಾಯು ಕಾಯಿಲೆಯುಳ್ಳವರಿಗೆ ಹೋಗಿ ಬರಲು ಅನೂಕೂಲವಾಗುತ್ತದೆ ಎಂದು ಇಲ್ಲಿಯೇ ವಾಸವಾಗಿದ್ದರು. ಇಬ್ರಾಹಿಮಪುರದಲ್ಲಿ ನಾಲ್ಕು ದಶಕಗಳ ಹಿಂದೆ ಶಿಕ್ಷಣ ಸಂಸ್ಥೆ ಆರಂಭಿಸಿ ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸುತ್ದಿದ್ದರು. ಗಡಿನಾಡಲ್ಲಿ ಕನ್ನಡ ವಾರಪತ್ರಿಕೆಯನ್ನು ಹೊರಡಿಸಿದ್ದರು.

ಶ್ರೀಗಳ ನಿಧನಕ್ಕೆ ಮೈಂದರಗಿ ಮಹಾಂತ ಸ್ವಾಮಿಗಳು, ಹತ್ತಕಣಬಸದ ಪ್ರಭುಶಾಂತಲಿಂಗ ಸ್ವಾಮೀಜಿ, ಚಲಗೇರಾ ಶಾಂತವೀರ ಶಿವಾಚಾರ್ಯರು, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮಿಗಳು, ಶಿವಯೋಗಾಶ್ರಮದ ಶಿವದೇವಿ ಮಾತಾಜಿ ಸಂತಾಪ ಸಲ್ಲಿಸಿದ್ದಾರೆ. 

ಮಹಾಂತ ಸ್ವಾಮೀಜಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜೂ.7ರಂದು ಮಧ್ಯಾಹ್ನ 1ಕ್ಕೆ ಇಬ್ರಾಹಿಂಪುರ ಮಠದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.