ಅಫಜಲಪುರ: ‘ದೇವರಾಜ ಅರಸು ವಸತಿ ಯೋಜನೆಯಲ್ಲಿ ಹೆಚ್ಚುವರಿಯಾಗಿ 500 ಮನೆಗಳು ಮಂಜೂರಾತಿ ನೀಡಿ ಎರಡು ವರ್ಷ ಕಳೆದರೂ ಇಲ್ಲಿಯವರೆಗೂ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಆದೇಶ ಪತ್ರ ನೀಡುತ್ತಿಲ್ಲ. ಇದಕ್ಕೆ ಶಾಸಕ ಎಂ.ವೈ.ಪಾಟೀಲ್ ಬೆಂಬಲಿಗ ಗ್ರಾ.ಪಂ. ಸದಸ್ಯರು ತಡೆ ಒಡ್ಡುತ್ತಿದ್ದಾರೆ. ಇದರಿಂದ ಗ್ರಾಮದ ಬಡ ಜನರಿಗೆ ಅನ್ಯಾಯವಾಗುತ್ತಿದೆ. ಸಮಸ್ಯೆ ಪರಿಹರಿಸದಿದ್ದರೆ ಗ್ರಾಮದ ಹತ್ತಿರವಿರುವ ರಾಷ್ಟ್ರೀಯ ಹೆದ್ದಾರಿ ಮೇಲೆ ರಸ್ತೆತಡೆ ಚಳವಳಿ ನಡೆಸುತ್ತೇವೆ’ ಎಂದು ಗೊಬ್ಬೂರ (ಬಿ) ಗ್ರಾಪಂ ಅಧ್ಯಕ್ಷೆ ಊರ್ಮಿಳಾ ಪ್ರಭು ದೇವತ್ಕಲ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2022ರಲ್ಲಿ ಅಂದಿನ ಲೋಕಸಭಾ ಸದಸ್ಯರಾಗಿದ್ದ ಡಾ.ಉಮೇಶ್ ಜಾಧವ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮನವಿ ಮಾಡಿಕೊಂಡಾಗ ಸರ್ಕಾರವು 500 ಮನೆಗಳನ್ನು ನೀಡಿದೆ. 422 ನಿರ್ಗತಿಕ ಫಲಾನುಭವಿಗಳ ಪಟ್ಟಿ 70 ವಿಧವೆಯರು, 8 ಮಂದಿ ಅಂಗವಿಕಲ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಲಾಗಿದೆ. ಆದರೆ ವಿಧಾನಸಭೆ ಚುನಾವಣೆ ನಂತರ ಶಾಸಕರು ಹಾಗೂ ಅವರ ಪುತ್ರರಿಗೆ ಗ್ರಾಮದ ಕೆಲವರು 500 ಮನೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರಿಂದ 2023ರ ಜೂನ್ 12ರಂದು ಶಾಸಕ ಎಂ.ವೈ.ಪಾಟೀಲ್ ಫಲಾನುಭವಿಗಳಿಗೆ ಕಾರ್ಯಾದೇಶ ನೀಡದಂತೆ ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಇದರಿಂದ ಇಲ್ಲಿಯವರೆಗೆ ಮನೆಗಳ ಹಂಚಿಕೆಯಾಗಿಲ್ಲ. 10 ದಿನಗಳ ಒಳಗಾಗಿ ಕಾರ್ಯಾದೇಶ ನೀಡುವಂತೆ ಮಾಡಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆದು ಧರಣಿ ನಡೆಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಸುಮಿತ್ರಾ ಚವ್ಹಾಣ, ತಾಹೇರಾಬೇಗಂ ಅಫಜಲಪುರ, ಪಿರ್‌ಅಹ್ಮದ್ ಜಮಾದಾರ, ಹರಿಶ್ಚಂದ್ರ ಪವಾರ, ಶ್ರೀಶೈಲ ಯಮಾಜಿ, ಕಲಪ್ಪ ಕುಶಾಳಕರ, ಈರಣ್ಣ ಹಿರೇಕುರುಬರ, ಜಬ್ಬಿನಾ ಬೇಗಂ ಜಮಾದಾರ, ಪ್ರಭು ದೇವತ್ಕಲ್, ರಾಜು ಪಡಶೆಟ್ಟಿ, ಫಕ್ರುದ್ದೀನ್ ಜಮಾದಾರ, ಶಿವಾನಂದ ಪಡಶೆಟ್ಟಿ, ಲಕ್ಷಣ ಕೊಕನೂರ, ಶಂಕರ ರಾಠೋಡ, ಮಹಮ್ಮದ್ ಸಾಧಿಕ್ ಅಫಜಲಪುರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.