ADVERTISEMENT

ಕಲಬುರಗಿ | ‘ಮೆರವಣಿಗೆಗಿಂತ ಆದರ್ಶ ಪಾಲನೆ ಮುಖ್ಯ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 4:44 IST
Last Updated 19 ಏಪ್ರಿಲ್ 2022, 4:44 IST
ಶಹಾಬಾದ್‌ ನಗರದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಆಯೋಜಿಸಿದ್ದ ‘ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬೃಹತ್ ಸಮಾವೇಶ’ ಕಾರ್ಯಕ್ರಮವನ್ನು ಡಿ.ಜಿ.ಸಾಗರ ಉದ್ಘಾಟಿಸಿದರು
ಶಹಾಬಾದ್‌ ನಗರದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಆಯೋಜಿಸಿದ್ದ ‘ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬೃಹತ್ ಸಮಾವೇಶ’ ಕಾರ್ಯಕ್ರಮವನ್ನು ಡಿ.ಜಿ.ಸಾಗರ ಉದ್ಘಾಟಿಸಿದರು   

ಶಹಾಬಾದ್: ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಭಾವ ಚಿತ್ರಗಳ ಮೆರವಣಿಗೆಗಿಂತ ಅವರ ವಿಚಾರಗಳ ಪಾಲನೆ ಅಗತ್ಯವಾಗಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿ ನಿಮಿತ್ತ ನಡೆದ ‘ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬೃಹತ್ ಸಮಾವೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಬ್ಬರದ ಮೆರವಣಿಗೆಯಲ್ಲಿ ಬಸವಣ್ಣ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರು ಕಳೆದು ಹೋಗುತ್ತಿದ್ದಾರೆ. ಅವರು ಹೇಳಿಕೊಟ್ಟ ವಿಚಾರಗಳು, ಅವರ ಬದುಕಿನ ಸಂದೇಶಗಳು ಸಮಾಜದಲ್ಲಿ ಹರಡುವಂತಾಗಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಅಲ್ಲದೇ ಹಾದಿ ಬೀದಿಗಳಲ್ಲಿ ಅಂಬೇಡ್ಕರ್ ಕೂಡಿಸುವ ಬದಲು ನಮ್ಮ ಮನೆ ಮನಗಳಲ್ಲಿ ಅಂಬೇಡ್ಕರ್ ನೆಲೆಸುವಂತಾಗಬೇಕು ಎಂದು ಅವರು ತಿಳಿಸಿದರು.

ADVERTISEMENT

ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಅಪ್ಪುಗೆರೆ ಸೋಮಶೇಖರ ಮಾತನಾಡಿ, ಇಂದು ಅಂಬೇಡ್ಕರಿಂದ ಲಾಭ, ಮೀಸಲು ಪಡೆದ ಮನಸ್ಸುಗಳಿಗೆ ಅಂಬೇಡ್ಕರ್ ಬೇಕಾಗಿಲ್ಲ. ಬದಲಾಗಿ ಅವರು ಬರೆದಿರುವ ಸಂವಿಧಾನದ ಅಡಿಯಲ್ಲಿ ಬರುವ ಎಲ್ಲ ರಕ್ಷಣೆ, ಸೌಲಭ್ಯಗಳು ಬೇಕಾಗಿವೆ ಎಂದರು.

ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ, ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿದರು. ವರಜ್ಯೋತಿ ಭಂತೇಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ದಸಂಸ ಮುಖಂಡ ಮಲ್ಲೇಶಿ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಜಯಂತೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕರಣಿಕ್ ಗಿರೀಶ ಕಂಬಾನೂರ, ಶಿವಪುತ್ರ ಕರಣಿಕ್, ಜಯಂತೋತ್ಸವ ಸಮಿತಿ ಗೌರಾವಾಧ್ಯಕ್ಷ ರಜನಿಕಾಂತ ಕಂಬಾನೂರ ಇದ್ದರು.

ಜಯಂತೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕರಣಿಕ್ ಪ್ರಾಸ್ತಾವಿಕ ನುಡಿದರು.ಪೂಜಪ್ಪ ಮೇತ್ರೆ ನಿರೂಪಿಸಿದರು, ಪ್ರವೀಣ ರಾಜನ್ ಸ್ವಾಗತಿಸಿದರು,ಪುನೀತ್ ಹಳ್ಳಿ ವಂದಿಸಿದರು.

ಸಿದ್ದಾರ್ಥ ಚಿಮ್ಮಾಇದ್ಲಾಯಿ ತಂಡದವರಿಂದ ಭೀಮ ಕ್ರಾಂತಿ ಗೀತೆ ಹಾಗೂ ಶಿವಯೋಗಿ ಮೇತ್ರೆಮತ್ತು ರಘುನಾಥ ಜಾಯಿ ಸಂಗಡಿಗರಿಂದ ಹೋರಾಟದ ಹಾಡುಗಳು ಮನಸೂರೆಗೊಂಡವು. ಅಂಬೇಡ್ಕರ್ ಭವ್ಯ ಮೆರವಣಿಗೆಯನ್ನು ಡಿವಾಯ್‍ಎಸ್‍ಪಿ ಉಮೇಶ ಚಿಕ್ಕಮಠ ಉದ್ಘಾಟಿಸಿದರು. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಧ್ವಜಾರೋಹಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.