ADVERTISEMENT

ಸ್ವಾಭಿಮಾನದ ಸಂಕೇತ ಡಾ. ಅಂಬೇಡ್ಕರ್: ಕುಲಪತಿ ಪ್ರೊ.ಎಸ್.ಆರ್. ನಿರಂಜನ್ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 14:40 IST
Last Updated 10 ಮೇ 2019, 14:40 IST
ಅಂಬೇಡ್ಕರ್‌ ಜಯಂತಿ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನಡೆದ ಸಮಾರಂಭಕ್ಕೆ ಕುಲಪತಿ ಪ್ರೊ.ಎಸ್‌.ಆರ್.ನಿರಂಜನ ಚಾಲನೆ ನೀಡಿದರು
ಅಂಬೇಡ್ಕರ್‌ ಜಯಂತಿ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನಡೆದ ಸಮಾರಂಭಕ್ಕೆ ಕುಲಪತಿ ಪ್ರೊ.ಎಸ್‌.ಆರ್.ನಿರಂಜನ ಚಾಲನೆ ನೀಡಿದರು   

ಕಲಬುರ್ಗಿ: 'ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೆಸರೇ ಕೋಟ್ಯಂತರ ಜನರಿಗೆ ಸ್ಫೂರ್ತಿ. ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಹೇಳಿದರು.

ಅಂಬೇಡ್ಕರ್‌ ಜಯಂತಿ ಅಂಗವಾಗಿ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನೃಪತುಂಗ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

’ಇಡೀ ವಿಶ್ವದಲ್ಲೇ ಅತ್ಯುತ್ಕೃಷ್ಟ ಲಿಖಿತ ಸಂವಿಧಾನವನ್ನು ಭಾರತ ಹೊಂದಿದೆ ಎಂದರೆ ಅದಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ಪ್ರಧಾನ ಶಿಲ್ಪಿ. ಸೃಜನಶೀಲ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ ಎಂದೇ ಹೆಸರಾಗಿದ್ದ ಅಂಬೇಡ್ಕರ್‌ ಅವರು ಭಾರತ ಕಂಡ ಒಂದು ಅದ್ಭುತ ಶಕ್ತಿ. ಕ್ರೀಡೆಗಳಲ್ಲಿ ಪಂದ್ಯದ ಪುರುಷೋತ್ತಮನನ್ನು (ಮ್ಯಾನ್‌ ಆಫ್‌ ದಿ ಮ್ಯಾಚ್‌) ಆಯ್ಕೆ ಮಾಡುವಂತೆ ಸಂವಿಧಾನ ರಚನಾಕಾರರಲ್ಲಿ ಉತ್ತಮೋತ್ತಮರನ್ನು ಆಯ್ಕೆ ಮಾಡಲು ಅವಕಾಶವಿದ್ದರೆ ಅಂಬೇಡ್ಕರ್‌ ಅವರು ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಟರು ಎಂದು ಸಹಜವಾಗಿಯೇ ಆಯ್ಕೆಯಾಗುತ್ತಾರೆ. ಅನ್ಯಾಯ, ಅಸಮಾನತೆ ಹಾಗೂ ಶೋಷಣೆಗಳ ವಿರುದ್ಧದ ಎಲ್ಲ ಚಳವಳಿಗಳಿಗೆ ಇಂದಿಗೂ ಅಂಬೇಡ್ಕರ್‌ ಅವರ ಚಿಂತನೆಗಳೇ ಬಳುವಳಿ. ಅಂಬೇಡ್ಕರ್‌ ಅವರು ಅಂದು, ಇಂದು ಹಾಗೂ ಮುಂದೆಯೂ ಶೋಷಿತರೆಲ್ಲರಿಗೂ ಸಮಾನತೆ ಹಾಗೂ ಸ್ವಾಭಿಮಾನದ ಸಂಕೇತವಾಗಿದ್ದಾರೆ’ ಎಂದರು.

ADVERTISEMENT

‌ಚಿಗರಳ್ಳಿ ಮರಳುಶಂಕರ ಮಠದ ಸಿದ್ದಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ನೃಪತುಂಗ ವಸತಿ ನಿಲಯದ ಪಾಲಕ ಡಾ.ಎಚ್.ಎಸ್. ಜಂಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಲಸಚಿವ ಪ್ರೊ. ಸೋಮಶೇಖರ್, ಡಾ.ವಿ.ಟಿ. ಕಾಂಬಳೆ, ಪ್ರೊ.ಕೆ.ಎಸ್. ಮಾಲಿಪಾಟಿಲ್, ಡಾ.ಎಂ.ಎಸ್. ಪಾಸೋಡಿ, ಡಾ.ರಮೇಶ್ ಲಂಡನಕರ್, ಪ್ರೊ.ಕೆ ಸಿದ್ದಪ್ಪ, ಡಾ. ವಿಜಯಕುಮಾರ ಸಾಲಿಮನಿ, ರಾಜಕುಮಾರ ಕಪನೂರ, ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗೌತಮ್ ಕರಿಕಲ್, ಶ್ರೀಕಾಂತ್ ದೊಡ್ಡಮನಿ ಕಾಳನೂರ, ಸದಾಶಿವ ಹರವಾಳ, ಅಶೋಕ ಹೂವಿನಹಳ್ಳಿ, ಡಾ. ರಾಜಕುಮಾರ ದಣ್ಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.