ಕಲಬುರಗಿ: ಭಾರತ ರತ್ನ ಡಾ. ಭೀಮರಾವ್ ಅಂಬೇಡ್ಕರ್ ಅವರು ನಡೆದಾಡಿ, ಮಕ್ಕಳ ಶಿಕ್ಷಣ, ಸಮುದಾಯದ ಸಂಘಟನೆ ಮತ್ತು ಹೋರಾಟದ ಮಹತ್ವವನ್ನು ತಿಳಿಸಿಕೊಟ್ಟಿದ್ದ ಕಲಬುರಗಿಯ ನೆಲದಲ್ಲಿ ಸೋಮವಾರ ಅಂಬೇಡ್ಕರ್ ಅವರ 134ನೇ ಜನ್ಮದಿನೋತ್ಸವದ ‘ಹಬ್ಬ’ ಅದ್ದೂರಿಯಾಗಿ ಜರುಗಿತು.
ದೇಶದ ಜನತಂತ್ರದ ಬೇರುಗಳನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದ ಸಂವಿಧಾನ ಶಿಲ್ಪಿಗೆ ಅಸಂಖ್ಯಾತ ಜನರು ಪುಷ್ಪ ನಮನ ಸಲ್ಲಿಸಿದರು. ಅಂಬೇಡ್ಕರ್ ಹಬ್ಬದ ಕೇಂದ್ರ ಬಿಂದುವಾದ ಜಗತ್ ವೃತ್ತದಲ್ಲಿ ಜಾತ್ರೆಯಂತಹ ಸಡಗರ ಮನೆ ಮಾಡಿತ್ತು.
ಮುಂಜಾನೆಯಿಂದಲೇ ‘ಜೈ ಭೀಮ್, ಜೈ ಜೈ ಭೀಮ್’ ಎಂದು ಘೋಷಣೆ ಕೂಗುತ್ತಾ ಅಂಬೇಡ್ಕರ್ ಪ್ರತಿಮೆ ಬಳಿಗೆ ಬಾಬಾ ಸಾಹೇಬರ ಅಭಿಮಾನಿಗಳು, ಅನುಯಾಯಿಗಳು, ಯುವಕರು, ಮಹಿಳೆಯರು, ರಾಜಕೀಯ ನಾಯಕರು ಬಂದರು. ಪ್ರತಿಮೆ ಮುಂಭಾಗದಲ್ಲಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಂತರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನಗರವೂ ಸೇರಿದಂತೆ ಸುತ್ತಲಿನ ಹಳ್ಳಿಗಳು, ನಾನಾ ತಾಲ್ಲೂಕುಗಳಿಂದ ಮಕ್ಕಳಿಂದ ವೃದ್ಧರ ಆದಿಯಾಗಿ ಬಂದು ಅಂಬೇಡ್ಕರ್ ಪ್ರತಿಮೆಗೆ ನಮಿಸಿದರು. ಜಗತ್ ವೃತ್ತದಲ್ಲಿನ ಪ್ರತಿಮೆ ಮುಂಭಾಗ, ಭೀಮಾ ಕೋರೆಗಾಂವ್ ವಿಜಯ ಸ್ತಂಭ, ಅಂಬೇಡ್ಕರ್ ಜೀವನ ಚಿತ್ರಣವನ್ನು ಬಿಂಬಿಸುವ ಕಟೌಟ್, ಭಾವಚಿತ್ರಗಳ ಮುಂದೆ ನಿಂತು ಸೆಲ್ಫಿ, ಕುಟುಂಬ ಸಮೇತ ಫೋಟೊಗಳನ್ನು ತೆಗೆದುಕೊಂಡರು.
ಉದ್ಯಾನದ ವೇದಿಕೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಬಂದಿದ್ದ ಪುರುಷ ಮತ್ತು ಮಹಿಳಾ ಭಜನಾ ಮಂಡಳಿಗಳು ಭೀಮ ಗೀತೆ, ಅಂಬೇಡ್ಕರ್ ಜೀವನ ಚರಿತ್ರೆಯ ಗೀತೆಗಳನ್ನು ಹಾಡಿ, ಜಯಂತ್ಯುತ್ಸವಕ್ಕೆ ಮೆರುಗು ತಂದರು. ನೂರಾರು ಜನರು ಆಸಕ್ತಿಯಿಂದ ಆಲಿಸಿದರು.
ಅಂಬೇಡ್ಕರ್, ಬುದ್ಧನ ಸಂದೇಶ ಹಾಗೂ ಚಿಂತನೆಗಳ ಪುಸ್ತಕ, ನೀಲಿ ಶಾಲು, ಬೌದ್ಧ ಧಮ್ಮದ ಪಂಚಶೀಲ ಧ್ವಜಗಳ ಮಾರಾಟ ಜೋರಾಗಿತ್ತು. ‘ಜೈ ಜೈ ಭೀಮ್’, ‘ಜೈ ಅಂಬೇಡ್ಕರ್’ ಘೋಷಣೆಗಳು ಇಡೀ ದಿನ ಮೊಳಗಿದವು. ನೀಲಿ ಧ್ವಜಗಳು ರಾರಾಜಿಸಿದವು.
ಬೈಕ್, ಕಾರು, ಆಟೊಗಳಿಗೆ ನೀಲಿ ಬಣ್ಣದ ಬಾವುಟಗಳನ್ನು ಕಟ್ಟಿಕೊಂಡ ಯುವಕರು ನೆತ್ತಿ ಸುಡುವ ಬಿಸಿಲಿನಲ್ಲಿ ಬೈಕ್ ರ್‍ಯಾಲಿ ನಡೆಸಿದರು. ವೃತ್ತಗಳಲ್ಲಿ ನಿಂತು ‘ಜೈ ಭೀಮ್’ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಸಮತಾ ಸೈನಿಕ ದಳ, ಆಟೊ ಚಾಲಕರ ಸಂಘ, ನೌಕರರ ಸಂಘ ಸೇರಿದಂತೆ ಹಲವರು ನಾನಾ ಕಡೆಗಳಲ್ಲಿ ಅನ್ನಸಂತರ್ಪಣೆ ಮಾಡಿ, ನೀರು, ಮಜ್ಜಿಗೆ ವಿತರಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಯಂತಿ ಅಂಗವಾಗಿ ಮಾತೃ ಶಕ್ತಿ ಮಹಿಳಾ ಜಾಥಾಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ದಾಕ್ಷಾಯಿಣಿ ಎಸ್.ಅಪ್ಪ ಅವರು ಚಾಲನೆ ನೀಡಿದರು. ಡಾ. ಎಸ್.ಎಂ. ಪಂಡಿತ್ ರಂಗಮಂದಿರ ಸಮೀಪ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗಾವರ ಬಣ) ಜಿಲ್ಲಾ ಸಮಿತಿಯವರು ರಕ್ತದಾನ ಶಿಬಿರ ನಡೆಸಿಕೊಟ್ಟರು. ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು.
ಸಂಜೆ ವೇಳೆ ವಿದ್ಯುತ್ ದೀಪಾಲಂಕೃತ ವಾಹನಗಳಲ್ಲಿ ಅಂಬೇಡ್ಕರ್ ಅವರ ಮೂರ್ತಿಗಳು, ಭಾವಚಿತ್ರಗಳನ್ನು ಇರಿಸಿ ಅಬ್ಬರದ ಮೆರವಣಿಗೆ ಮಾಡಲಾಯಿತು. ಡಿಜೆ ಹಾಡುಗಳಿಗೆ ಯುವಕರ ನೃತ್ಯ, ಎದೆಗಡಚಿಕ್ಕುವ ಸಂಗೀತ, ಯುವಕರ ಕುಣಿತ ನೋಡುಗರ ಮೈನವಿರೇಳಿಸಿತು.
Quote - ಅಮೂಲ್ಯ ರತ್ನವಾಗಿ ಅಂಬೇಡ್ಕರ್ ಜನಿಸಿದ್ದು ಅವರು ರಚಿಸಿದ್ದ ಸಂವಿಧಾನ ಚೌಕಟ್ಟಿನಲ್ಲಿ ಆಡಳಿತ ನಡೆಸಬೇಕು. ಶಿಕ್ಷಣಕ್ಕೆ ಒತ್ತುಕೊಡಬೇಕು ಯಲ್ಲಪ್ಪ ನಾಯಕೊಡಿ ಪಾಲಿಕೆ ಮೇಯರ್
Quote - ನಾವು ಈ ಹುದ್ದೆಗೆ ಬರಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ. ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಂಡು ಪ್ರಗತಿ ಕಾಣಲು ಸಾಧ್ಯವಿದೆ ಬಿ.ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
Cut-off box - ‘ಸಮಾನತೆಗಾಗಿ ಶ್ರಮಿಸಿದ್ದ ಮಹಾನ್ ವ್ಯಕ್ತಿ’ ಕಲಬುರಗಿ: ‘ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ತತ್ವ ಮತ್ತು ಸಿದ್ಧಾಂತಗಳ ತಳಹದಿಯ ಮೇಲೆ ಸಮಾಜದಲ್ಲಿ ಸಮಾನತೆ ಹಾಗೂ ಬದಲಾವಣೆ ತರಲು ಸಾಕಷ್ಟು ಶ್ರಮಿಸಿ ತಮ್ಮ ಜೀವನವನ್ನೇ ಮುಡಿಪಾಗಿ ಇರಿಸಿದ್ದರು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಇಲ್ಲಿನ ಅಂಬೇಡ್ಕರ್ ಪ್ರತಿಮೆ ಬಳಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸರ್ಕಾರಿ–ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಎಲ್ಲೆಡೆ ಸಂಚರಿಸಿ ವಿಶ್ವದ ಸಂವಿಧಾನಗಳನ್ನು ಓದಿ ಅವುಗಳನ್ನು ಅರ್ಥೈಸಿಕೊಂಡು ಭಾರತಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟರು. ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಲು ಅಂಬೇಡ್ಕರ್ ಅವರ ಮುಂದಾಲೋಚನೆ ಕಾರಣ’ ಎಂದರು. ಬೀದರ್ ಬುದ್ಧವಿಹಾರದ ಭಂತೆ ವರಜ್ಯೋತಿ ಮಾತನಾಡಿ ‘ಅಂಬೇಡ್ಕರ್ ಪ್ರತಿಮೆ ಹಿಂಭಾಗದ ಜಾಗದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಜಿಲ್ಲಾಡಳಿತ ಪಾಲಿಕೆ ಸಹಕಾರ ನೀಡಬೇಕು. ಇದರಿಂದ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ’ ಎಂದರು. ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಜತೆಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಪುಟ್ಟಮಣಿ ದೇವಿದಾಸ ಅವರು ವಿಶೇಷ ಉಪನ್ಯಾಸ ನೀಡಿದರು. ಸಂವಿಧಾನದ ಪೂರ್ವಪೀಠಿಕೆ ಬೋಧಿಸಲಾಯಿತು. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಶಾಸಕ ಅಲ್ಲಮಪ್ರಭು ಪಾಟೀಲ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಜಗದೇವ ಗುತ್ತೇದಾರ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಎಸ್.ಪಿ. ಅಡ್ಡೂರು ಶ್ರೀನಿವಾಸುಲು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅನಿರುದ್ಧ ಭಂತೆ ಸುದಮ್ಮ ಭಂತೆ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಾಸು ಎಸ್. ವಂಟಿ ಎಸ್‌ಸಿ/ಎಸ್‌ಟಿ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿಠ್ಠಲ ಗೋಳಾ ಅಧ್ಯಕ್ಷ ಮಹೇಶ ಹುಬ್ಬಳ್ಳಿ ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ಅಲ್ಲಾಬಕಾಷ್ ಪ್ರಾಂಶುಪಾಲ ರಾಜಶೇಖರ ಮಾಂಗ್ ಮುಖಂಡರಾದ ಅಂಬಾರಾಯ ಅಷ್ಟಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Cut-off box - ಅಂಬೇಡ್ಕರ್ ಭೇಟಿ ಚಿರಸ್ಥಾಯಿ ಅಂಬೇಡ್ಕರ್ ಅವರು ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣಕ್ಕೆ 1945ರ ಏಪ್ರಿಲ್ 28 ಹಾಗೂ 1952ರ ಏಪ್ರಿಲ್ 27ರಂದು ಭೇಟಿ ಕೊಟ್ಟಿದ್ದರು. ಅಂದಿನ ಸ್ಥಳೀಯ ನಾಯಕರೊಂದಿಗೆ ಸುಮಾರು ಎರಡು ಗಂಟೆ ಮಾತನಾಡಿದ್ದ ಅಂಬೇಡ್ಕರ್ ಮಕ್ಕಳ ಶಿಕ್ಷಣ ಸಮುದಾಯ ಹೋರಾಟದ ಮಹತ್ವದ ಕುರಿತು ಚರ್ಚಿಸಿದ್ದರು. ಆ ಭೇಟಿಯ ನೆನಪಿನ ಕ್ಷಣವನ್ನು ಇಂದಿಗೂ ಚಿರಸ್ಥಾಯಿಯಾಗಿ ಇರಿಸಿ ಅಂಬೇಡ್ಕರ್ ಅವರು ಬಂದು ಹೋಗಿದ್ದ ಸ್ಥಳದಲ್ಲಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಹೀಗಾಗಿ ಕಲಬುರಗಿ ನಗರ ಸೇರಿ ಜಿಲ್ಲೆಯಾದ್ಯಂತ ಅಂಬೇಡ್ಕರ್ ಜಯಂತಿಯನ್ನು ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.