ADVERTISEMENT

ಹೋರಾಟದಿಂದ ಹಕ್ಕು ಪಡೆಯಲು ಸಾಧ್ಯ: ನೀಲಕಂಠ ಬಡಿಗೇರ

ಸೂಗುರು (ಎನ್): ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 4:00 IST
Last Updated 27 ಏಪ್ರಿಲ್ 2022, 4:00 IST
ವಾಡಿ ಸಮೀಪದ ಸುಗೂರು(ಎನ್) ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ನೀಲಕಂಠ ಬಡಿಗೇರ ಮಾತನಾಡಿದರು
ವಾಡಿ ಸಮೀಪದ ಸುಗೂರು(ಎನ್) ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ನೀಲಕಂಠ ಬಡಿಗೇರ ಮಾತನಾಡಿದರು   

ವಾಡಿ: ‘ಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ಹಾಗೂ ಸಾಮಾಜಿಕ ಶೋಷಣೆಗೆ ತುತ್ತಾಗಿರುವ ಪರಿಶಿಷ್ಟರು ಸಂಘಟನಾತ್ಮಕ ಹೋರಾಟಗಳಿಂದ ಮಾತ್ರ ತಮ್ಮ ಹಕ್ಕು ಮತ್ತು ಸವಲತ್ತು ಪಡೆದುಕೊಳ್ಳಲು ಸಾಧ್ಯ’ ಎಂದು ಹೋರಾಟಗಾರ ಹಾಗೂ ಚಿಂತಕ ನೀಲಕಂಠ ಬಡಿಗೇರ ಹೇಳಿದರು.

ಸೂಗುರು (ಎನ್) ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತವೆ. ದಲಿತರ ಕೇವಲ ಮತ ಬ್ಯಾಂಕ್‌ಗಳಲ್ಲ. ಶೋಷಣೆ, ದಬ್ಬಾಳಿಕೆ ನಮ್ಮ ಮೇಲೆ ಹೇರಲು ಬಂದರೆ ರಾಜಕೀಯ ಛಿದ್ರ ಮಾಡಬಲ್ಲೆವು ಎನ್ನುವುದನ್ನು ತೋರಿಸಬೇಕಾಗಿದೆ. ಸಂಘಟನಾತ್ಮಕವಾಗಿ ನಾವು ಬಲಗೊಳ್ಳದ ಹೊರತು ಸಮಾಜದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಸಂಘಟನೆಯ ಮರುಹುಟ್ಟು ಬಹಳ ಅತ್ಯಗತ್ಯವಾಗಿದೆ ಎಂದರು.

ADVERTISEMENT

ದಲಿತ ಸಂಘಟನಾ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಮಾತನಾಡಿ, ಮನುವಾದಿ ಬಿಜೆಪಿ ಸರ್ಕಾರ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದೆ. ಮೀಸಲಾತಿಯನ್ನು ತೆಗೆದುಹಾಕುವ ಮಾತನಾಡುತ್ತಿದೆ, ಸಂವಿಧಾನ ಸುಡುವ ಹೇಳಿಕೆಯನ್ನು ಯಾವುದೇ ಭಯವಿಲ್ಲದೆ ಹೇಳುತ್ತಿದೆ. ಜೀವನಕ್ಕೆ ಸಂಚಕಾರ ತರುವ ಮಾತುಗಳನ್ನಾಡುತ್ತಿದ್ದರೂ ನಾವು ಮೌನ ಮುರಿಯುತ್ತಿಲ್ಲ. ಇದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದರು.

ಕೋಮುವಾದಿ ಬಿಜೆಪಿ ಸರ್ಕಾರ ಅಂಬೇಡ್ಕರರ ವಿಚಾರಗಳನ್ನು ಸಂಪೂರ್ಣ ಕಡೆಗಣಿಸುವ ಮೂಲಕ ಮನುವಾದಿಗಳ ವಸ್ತು ಜಾರಿಗೆ ತರಲು ಪ್ರಯತ್ನ ನಡೆಸಿದೆ. ಹೀಗೆ ಸಂವಿಧಾನದ ವಿರುದ್ಧ ಬಹಿರಂಗವಾಗಿ ಮಾತನಾಡುವ ಬಿಜೆಪಿ ನಾಯಕರನ್ನು ರಾಷ್ಟ್ರ ದ್ರೋಹದಡಿ ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು.

ಸೂಗುರು ಭೋಜಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಿರಗಪ್ಪ ತಾತ ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಮುಖಂಡರಾದ ಪರ್ವತರೆಡ್ಡಿ ಪಾಟೀಲ, ಭೀಮರೆಡ್ಡಿಗೌಡ ಕುರಾಳ, ಶರಣುಗೌಡ ಕುರಾಳ, ರಾಮರೆಡ್ಡಿಗೌಡ ಕೊಳ್ಳಿ, ಚನ್ನಬಸಪ್ಪ ಮಾರಡಗಿ, ಶರಣಗೌಡ ಸಂಕನೂರ, ವಿಶ್ವನಾಥರಡ್ಡಿ ಪಾಟೀಲ, ಬಸವರಾಜ ಹಡಪದ, ರಾಜೇಂದ್ರ ನಾಯ್ಕೋಡಿ, ಸುಖದೇವ ಚವ್ಹಾಣ, ಹರಿಶ್ಚಂದ ಚವ್ಹಾಣ, ಚಂದು ರಾಠೋಡ, ಶ್ರೀಮಂತ ಭಾವೇ, ರಾಜು ಭಾವೇ, ಶರಣಪ್ಪ ಭಾವೇ, ವಿಶ್ವರಾಧ್ಯ ಎಂ, ಭೀಮರಾಯ ಕುಂಬಿನ, ಸಿದ್ಧಪ್ಪ ಸನ್ನತಿ, ಮರೆಪ್ಪ ಕುಂಬಿನ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.