
ಕಲಬುರಗಿ: ‘ಕೊಡಗಿನ ರಂಗಭೂಮಿ ಟ್ರಸ್ಟ್ ಪ್ರಸ್ತುತ ಪಡಿಸುವ ‘ನಿಜಮಹಾತ್ಮ ಬಾಬಾಸಾಹೇಬ’ ನಾಟಕ ಪ್ರದರ್ಶನವನ್ನು ಫೆ.1ರಂದು ಸೇಡಂ ಮತ್ತು ಫೆ.2ರಂದು ಸಂಜೆ 5.30 ಗಂಟೆಗೆ ಕಲಬುರಗಿಯ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ನಾಟಕ ರಚನೆಕಾರ ಮತ್ತು ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.
‘ಈಗಾಗಲೇ 25 ಯಶಸ್ವಿ ಪ್ರದರ್ಶನ ಕಂಡಿರುವ ಈ ನಾಟಕದ ಪ್ರವಾಸವು ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿಯಿಂದ ಜನವರಿಯಲ್ಲಿ ಆರಂಭವಾಗಲಿದೆ. ಸುಮಾರು 2 ಗಂಟೆ 15 ನಿಮಿಷದ ನಾಟಕದಲ್ಲಿ ತಂತ್ರಜ್ಞರು ಸೇರಿ ಒಟ್ಟು 16 ಕಲಾವಿದರಿದ್ದಾರೆ. ನಾಟಕಕ್ಕೆ ₹100 ಟಿಕೆಟ್ ನಿಗದಿಪಡಿಸಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ನಾಟಕದ ಮೂಲಕ ಡಾ.ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ ಅನೇಕ ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಮನರಂಜನೆ, ಹಣ ಗಳಿಕೆ ನಮ್ಮ ಉದ್ದೇಶವಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರ ಗ್ರಂಥಗಳನ್ನು ಆಧರಿಸಿ ಪ್ರಜ್ಞಾಪೂರ್ವಕ ಮತ್ತು ದಾಖಲೆ ಸಮೇತ ವೈಚಾರಿಕ ದೃಷ್ಟಿಕೋನದಿಂದ ನಾಟಕವನ್ನು ಸಿದ್ಧಪಡಿಸಲಾಗಿದೆ’ ಎಂದರು.
‘ಕೆಲವರು ಡಾ.ಅಂಬೇಡ್ಕರ್ ಹೆಸರನ್ನೇ ಬಳಕೆಯ, ಹಣ ಗಳಿಕೆಯ ವಸ್ತುವನ್ನಾಗಿಸಿಕೊಂಡಿದ್ದಾರೆ. ಅವರು ಒಂದು ವರ್ಗದ ಆಸ್ತಿಯಲ್ಲ. ಕೊಡವ ಜನಾಂಗಕ್ಕೆ ಸೇರಿದ ನನಗೂ ಅಂಬೇಡ್ಕರ್ ಬೇಕು. ಬಾಬಾಸಾಹೇಬರು ಸಮಸ್ತ ಭಾರತೀಯರ ಆಸ್ತಿಯಾಗಬೇಕು. ನಾಟಕ ನೋಡದೆ ಅಥವಾ ಪುಸ್ತಕ ಓದದೆ ವಿರೋಧ ಮಾಡುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬಾರಾಯ ಅಷ್ಠಗಿ, ಜಗದೀಶ ಹುನಗುಂದ, ಬಸವರಾಜ ಮದ್ರಿಕಿ, ರಾಮಚಂದ್ರ ಸೂಗೂರು, ಗುರುರಾಜ್ ಭರತನೂರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.