ADVERTISEMENT

ಸಮುದಾಯ ಭವನದ ಹಣ ದುರುಪಯೋಗ: ಆರೋಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 15:17 IST
Last Updated 5 ನವೆಂಬರ್ 2020, 15:17 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ಕಲಬುರ್ಗಿ: ‘ಆಳಂದ ಪಟ್ಟಣದಲ್ಲಿ ಲಿಂಗಾಯತ ಸಮುದಾಯ ಭವನ ನಿರ್ಮಿಸಲು ಮಂಜೂರಾದ ₹ 1 ಕೋಟಿಯಲ್ಲಿ ₹ 75 ಲಕ್ಷ ಅನುದಾನವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಟ್ರಸ್ಟ್‌ ದುರುಪಯೋಗ ಮಾಡಿಕೊಂಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ ಸಂಗಾ ಈ ಅಕ್ರಮಕ್ಕೆ ಸಹಕರಿಸಿದ್ದಾರೆ. ಆದ್ದರಿಂದ ಟ್ರಸ್ಟ್‌ ಹಾಗೂ ಅಧಿಕಾರಿ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದರು.

‘ಈ ಬಗ್ಗೆ ಈಗಾಗಲೇ ದೂರು ನೀಡಿದರೂ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡಿಲ್ಲ. ಇನ್ನು ಒಂದು ವಾರ ಕಾದು ನೋಡುತ್ತೇವೆ. ಕ್ರಮ ಕೈಗೊಳ್ಳದಿದ್ದರೆ ನಗರ ಪೊಲೀಸ್‌ ಕಮಿಷನರ್‌ ಕಚೇರಿ ಮುಂದೆ ಆಮರಣಾಂತರ ಉಪಾವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಸಮುದಾಯ ಭವನ ನಿರ್ಮಾಣ ಜವಾಬ್ದಾರಿ ಹೊತ್ತ ಟ್ರಸ್ಟ್‌ಗೆ 2018ರ ಜೂನ್‌ 23ರಂದು ಮೊದಲ ಕಂತಿನ ಹಣ ₹ 25 ಲಕ್ಷ ಬಿಡುಗಡೆ ಆಗಿತ್ತು. ಆ ಹಣದಲ್ಲಿ ಸಮುದಾಯ ಭವನ ನಿರ್ಮಿಸುವ ಬದಲು ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ನೀಲನಕ್ಷೆಯನ್ನು ಉಲ್ಲಂಘಿಸಿರುವ ಟ್ರಸ್ಟ್‌ ಮುಖಂಡರು, ಮನಬಂದಂತೆ ನಿರ್ಮಿಸಿದ್ದಾರೆ’ ಎಂದೂ ದೂರಿದರು.

ADVERTISEMENT

‘ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ, ಕಟ್ಟಡವು ನಿಯಮ ಬಾಹಿರವಾಗಿದೆ. ಯಾವ ಉದ್ದೇಶಕ್ಕೆ ಸರ್ಕಾರ ₹ 25 ಲಕ್ಷ ನೀಡಿತ್ತೋ ಅದನ್ನು ಬಿಟ್ಟು ವಾಣಿಜ್ಯ ಸಂಕೀರ್ಣಕ್ಕೆ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಟ್ರಸ್ಟ್‌ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು’ ಎಂದು ಪ್ರಶ್ನಿಸಿ ನೋಟಿಸ್‌ ನೀಡಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ, 2020ರ ಮಾರ್ಚ್‌ 8ರಂದು ಎರಡನೇ ಕಂತಿನ ಹಣ ₹ 50 ಲಕ್ಷವನ್ನೂ ನೀಡಿದ್ದಾರೆ. ಮೊದಲ ಕಂತಿನ ಹಣ ದುರ್ಬಳಕೆ ಆಗಿದೆ ಎಂದು ನೋಟಿಸ್‌ ಕೊಟ್ಟವರೇ ಎರಡನೇ ಕಂತನ್ನೂ ಹೇಗೆ ಬಿಡಗಡೆ ಮಾಡಿದರು’ ಎಂದೂ ಸ್ವಾಮೀಜಿ ಪ್ರಶ್ನಿಸಿದರು.

‘ಕಾಂಗ್ರೆಸ್‌ ಮುಖಂಡ ಬಿ.ಆರ್‌. ಪಾಟೀಲ ಈ ಟ್ರಸ್ಟ್‌ ಅಧ್ಯಕ್ಷರಾಗಿದ್ದಾರೆ. ಅವರು ಪಕ್ಷದ ಪ್ರಭಾವ ಬಳಸಿ, ಅಧಿಕಾರಿಗಳ ಮೇಲೆ ಒತ್ತಡ ತಂದು ಪೂರ್ಣ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಈ ರೀತಿ ಸಮುದಾಯ ಭವನದ ಹೆಸರಲ್ಲಿ ತಪ್ಪು ದಾರಿ ತುಳಿಯುವುದು ಸರಿಯೇ?’ ಎಂದೂ ಕೇಳಿದರು.

‘ಈ ಪ್ರಮಾದ ಮಾಡಿದ ಟ್ರಸ್ಟ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಇದಕ್ಕೆ ನೀಡಿದ ಎಲ್ಲ ಹಣವನ್ನೂ ಶೇ 10ರ ಬಡ್ಡಿ ದರದಲ್ಲಿ ಮರಳಿ ವಸೂಲಿ ಮಾಡಬೇಕು. ಅಕ್ರಮಕ್ಕೆ ಸಹಕರಿಸಿದ ಅಧಿಕಾರಿ ರಮೇಶ ಸಂಗಾ ಅವರ ಮೇಲೂ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ತಕ್ಷಣ ಅವರನ್ನು ಅಮಾನತು ಮಾಡಬೇಕು’ ಎಂದೂ ಆಗ್ರಹಿಸಿದರು.

ಮುಖಂಡರಾದ ಮಲ್ಲನಗೌಡ ಮಾಲಿಪಾಟೀಲ, ಸಂತೋಷ ಬೆನಕನಳ್ಳಿ, ಮಹೇಶ ಪ್ರಭು ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಇದ್ದರು.

'ಅನುಮೋದನೆ ಸಿಕ್ಕಿದೆ’

‘ವೀರಶೈವ ಮಹಾಸಭಾ ಟ್ರಸ್ಟ್‌ ನಿರ್ಮಿಸುತ್ತಿರುವ ಲಿಂಗಾಯತ ಸಮುದಾಯ ಭವನದ ಬಗ್ಗೆ ಸಿದ್ಧಲಿಂಗ ಸ್ವಾಮಿ ಅವರಿಗೆ ಸರಿಯಾದ ಮಾಹಿತಿ ಇಲ್ಲ. ಅವರು ಪೂರ್ಣವಾಗಿ ವಿಷಯ ತಿಳಿದುಕೊಳ್ಳದೇ ಆರೋಪ ಮಾಡಿದ್ದಾರೆ. ಈ ಸಮುದಾಯ ಭವನದ ಬದಲಾದ ನೀಲನಕ್ಷೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆಯ ಆಯುಕ್ತರು ಅನುಮೋದನೆ ನೀಡಿದ ಮೇಲೆಯೇ ಕಾಮಗಾರಿ ಅರಂಭವಾಗಿದೆ. ಅಧಿಕಾರಿಗಳು ಎಲ್ಲವನ್ನೂ ಸ್ಪಷ್ಟಪಡಿಸಿಕೊಂಡ ಮೇಲೆಯೇ ಎರಡನೇ ಕಂತಿನ ಹಣ ಮಂಜೂರು ಮಾಡಿದ್ದಾರೆ’ ಎಂದು ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌. ಪಾಟೀಲ ಪ್ರತಿಕ್ರಿಯೆ ನೀಡಿದರು.

‘ಮೊದಲ ನಕ್ಷೆಯಲ್ಲಿ ಸಮುದಾಯ ಭವನ ಒಂದು ಕಡೆ, ವಾಣಿಜ್ಯ ಮಳಿಗೆ ಇನ್ನೊಂದು ಕಡೆ ಇದ್ದವು. ಇದರಿಂದ ಹೆಚ್ಚಿನ ಹಣ ವ್ಯರ್ಥವಾಗುತ್ತದೆ ಎಂದು ಪರಿಗಣಿಸಿ, ಹೊಸ ನೀಲನಕ್ಷೆಯ ಸಿದ್ಧಪಡಿಸಿ ಅದನ್ನು ಬಿಸಿಎಂ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಅವರು ಅನುಮೋದನೆ ನೀಡಿದ್ದಾರೆ. ಇದರ ಮಾಹಿತಿ ಇಲ್ಲದೇ ಸುಳ್ಳು ಆರೋಪ ಮಾಡಬಾರದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.