ಚಿಂಚೋಳಿ: ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಶಿಥಿಲ ಕಟ್ಟಡದಲ್ಲಿ ನಡೆಯುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಶಿಥಿಲ ಕಟ್ಟಡದಲ್ಲಿ ಮಕ್ಕಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಸಿರು ಬಿಗಿ ಹಿಡಿದು ಕಾರ್ಯನಿರ್ವಹಿಸುವ ಸ್ಥಿತಿಯಿದೆ.
ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಕಮಲಾಪುರ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿ, ಕಾಳಗಿ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿ, ಚಿಂಚೋಳಿ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳು ಸೇರಿ ಒಟ್ಟು 375 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು 90 ಕೇಂದ್ರಗಳು ಸ್ವಂತ ಕಟ್ಟಡಕ್ಕಾಗಿ ಕಾಯುತ್ತಿವೆ.
ಶಿಥಿಲ ಕಟ್ಟಡದ ಕಾರಣಕ್ಕಾಗಿ ಹೊಸ ಕಟ್ಟಡ ಮಂಜೂರಾಗಿದ್ದು, ಕೆಲವು ಕಡೆ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಇನ್ನೂ ಕೆಲವು ಕಡೆ ಕಾಮಗಾರಿ ಪ್ರಾರಂಭಿಸಬೇಕಾಗಿದೆ. ಖಾಸಗಿ ಅಥವಾ ಸಮುದಾಯ ಭವನ, ಶಾಲಾ ಕಟ್ಟಡ ಲಭ್ಯವಿದ್ದ ಕಡೆ ತಾತ್ಕಾಲಿಕವಾಗಿ ಸ್ಥಳಾಂತರಿಸಿ ಕೇಂದ್ರ ನಡೆಸಲಾಗುತ್ತಿದೆ. ಆದರೆ ಬೆನಕೆಪಳ್ಳಿ, ಸೇವು ನಾಯಕ ತಾಂಡಾ, ಚಂದು ನಾಯಕ ತಾಂಡಾ, ಚಿಂದಾನೂರ, ಸಿದ್ದಾಪುರ (ಗನ್ನು ನಾಯಕ) ತಾಂಡಾ, ಕನಕಪುರ, ಇರಗಪಳ್ಳಿ, ಶಿರೋಳ್ಳಿ, ವೆಂಕಟಾಪುರ, ಭಕ್ತಂಪಳ್ಳಿ ಮತ್ತು ಹಳ್ಳಕ್ಕೆ ಸಮೀಪವಿರುವ ಸೋಮಲಿಂಗದಳ್ಳಿ, ಗಣಾಪುರ, ಚೌಕಿ ತಾಂಡಾ, ಚಿಮ್ಮನಚೋಡ ಮೊದಲಾದ ಕೇಂದ್ರಗಳು ಹಳೆಯ ಕಟ್ಟಡದಲ್ಲಿಯೇ ನಡೆಸಲಾಗುತ್ತಿದೆ. ಇವುಗಳಲ್ಲಿ ಕೆಲ ಕಟ್ಟಡಗಳು ಸೋರುತ್ತಿದ್ದರೂ ಹಾಗೆಯೇ ಮುಂದುವರಿಸಲಾಗಿದೆ ಎಂಬುದು ಪಾಲಕರ ಆರೋಪವಾಗಿದೆ.
ಕೆಕೆಆರ್‌ಡಿಬಿ ನೆರವಿನಲ್ಲಿ 33 ಹೊಸ ಕಟ್ಟಡ ಮಂಜೂರಾಗಿದ್ದು ಕೆಲವು ಕಡೆ ಕಾಮಗಾರಿ ಆರಂಭವಾಗಿವೆ.
‘ಕೆಲ ಕಟ್ಟಡಗಳನ್ನು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ದುರಸ್ತಿ ಕೈಗೊಳ್ಳಲಾಗಿದೆ. ತೀರಾ ಅಪಾಯಕಾರಿಯಾದ ಕಟ್ಟಡಗಳನ್ನು ಬಳಕೆ ಮಾಡುತ್ತಿಲ್ಲ. ಮೇಲಧಿಕಾರಿಗಳು ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸವಂತೆ ಸೂಚನೆ ನೀಡಿದ್ದಾರೆ’ ಎಂದು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸರೋಜಾರಡ್ಡಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು ಅಂಗನವಾಡಿ ಕೇಂದ್ರಗಳು 375 ಸ್ವಂತ ಕಟ್ಟಡ ಹೊಂದಿರುವ ಕೇಂದ್ರಗಳು 285 ಇತರೆ ಕಟ್ಟಡಗಳಲ್ಲಿ ನಡೆಯುತ್ತಿರುವ ಕೇಂದ್ರಗಳು 90
ಮಳೆ ಬರುತ್ತಿರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸದೇ ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರಿಸಲು ಸೂಚಿಸಿದ್ದೇನೆಸವಿತಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಿಂಚೋಳಿ
ಬೆನಕೆಪಳ್ಳಿ-2 ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡವಿಲ್ಲ. ಹಳೆಯ ಕಟ್ಟಡ ಶಿಥಿಲಗೊಂದಿದ್ದು ಮಳೆಗಾಲದಲ್ಲಿ ಸೋರುತ್ತಿದೆ ಈಗಲೂ ಶಿಥಿಲ ಕಟ್ಟಡದಲ್ಲಿಯೇ ಕೇಂದ್ರ ನಡೆಸಲಾಗುತ್ತಿದೆನಾಗೇಶ ಬೆನಕೆಪಳ್ಳಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.