ಕಾಳಗಿ: ‘ಭಾಮಿನಿ ಷಟ್ಪದಿಯಲ್ಲಿ ರಚನೆಗೊಂಡ ‘ಅಣಿವೀರಭದ್ರೇಶ್ವರ ಪುರಾಣ’ ಗ್ರಂಥವು ಇತಿಹಾಸ ಸಾರುವ ಸಾಹಿತ್ಯ ಕೃತಿಯಾಗಿದೆ’ ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.
ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪುರಾಣ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಶೈವ ಪರಂಪರೆಯಲ್ಲಿ ವೀರಭದ್ರೇಶ್ವರ ದೇವರ ಪಾತ್ರ ಅತ್ಯಂತ ಮಹತ್ವದಾಗಿದೆ. ಸೋಲಾಪುರದ ದಾನಯ್ಯ ಮಠಪತಿ ರಚಿಸಿದ ಅಣಿವೀರಭದ್ರೇಶ್ವರ ಪುರಾಣ ಗ್ರಂಥ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಮನುಷ್ಯ ಧರ್ಮದ ತಳಹದಿಯಲ್ಲಿ ಬದುಕಿದ್ದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಯೂರಲು ಸಾಧ್ಯವಿದೆ. ಈ ಗ್ರಂಥ ರಚನೆಯಾಗಿ ಲೋಕಾರ್ಪಣೆಗೊಂಡಿದ್ದು ಮೈಲಿಗಲ್ಲೇ ಸರಿ’ ಎಂದು ಹರ್ಷ ವ್ಯಕ್ತಪಡಿಸಿದರು.
ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಪ್ರಧಾನ ಅರ್ಚಕ ಧನಂಜಯ್ಯ ಹಿರೇಮಠ, ಸಹ ಅರ್ಚಕ ಅಂಬರೀಷ ಹಿರೇಮಠ, ಗ್ರಂಥದಾನಿ ಮುದ್ದೇಬಿಹಾಳದ ಸೋಮಶೇಖರ ಅಣ್ಣೆಪ್ಪನವರ, ಪಟ್ಟದ ಪುರವಂತ ಸೋಮೇಶ್ವರ ಕಂಠಿ, ಬಸವರಾಜ ಕಂಠಿ, ಶಿವಪುತ್ರಪ್ಪ ಹಲಚೇರಿ, ಮಲ್ಲಿಕಾರ್ಜುನ ಗೋಳಾ, ಶಾಂತಾಬಾಯಿ ಅಣ್ಣೆಪ್ಪನವರ, ಶಶಿಕಲಾ ಸೋಲಾಪುರ, ಅಣಿವೀರಯ್ಯ ಸಾಲಿ, ರೇವಣಸಿದ್ದಯ್ಯ, ಬಸವರಾಜ ಪೂಜಾರಿ, ಶಿವರಾಜ ನಾಗಠಾಣ ಅನೇಕರು ಇದ್ದರು. ಶಿವರಾಜ ಅಂಡಗಿ ನಿರೂಪಿಸಿ, ಮಹಾರುದ್ರ ಮಠಪತಿ ಸ್ವಾಗತಿಸಿ, ಶರಣು ಗೋನಾಯಕ ವಂದಿಸಿದರು.
ಆನೆಯ ಮೇಲೆ ಮೆರವಣಿಗೆ: ಗ್ರಂಥ ಲೋಕಾರ್ಪಣೆ ಮುನ್ನ ಗರ್ಭಗುಡಿಯಲ್ಲಿ ಅಣಿವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ಸಲ್ಲಿಸಲಾಯಿತು.
ಕಾಳಗಿ-ಮಾಡಬೂಳ ಮುಖ್ಯರಸ್ತೆ ಬದಿಯ ದೇವಸ್ಥಾನ ಮಹಾದ್ವಾರದಿಂದ ಆನೆಯ ಮೇಲೆ ಗ್ರಂಥ ಇರಿಸಲಾಗಿತ್ತು. ಹಲಗೆ, ಡೊಳ್ಳು, ಭಜನೆ, ವಾದ್ಯಮೇಳದೊಂದಿಗೆ ಮಹಿಳೆಯರ ಕುಂಭ-ಕಳಶಗಳ ವೈಭವದ ಮೆರವಣೆ ಮಧ್ಯೆ ದೇವಸ್ಥಾನಕ್ಕೆ ತರಲಾಯಿತು. ಬಳಿಕ ಭಕ್ತರು ಗ್ರಂಥ ತಲೆ ಮೇಲೆ ಹೊತ್ತು ಐದು ಸುತ್ತು ಪ್ರದಕ್ಷಿಣೆ ಹಾಕಿ ವೇದಿಕೆಯ ಸನ್ನಿಧಿಗೆ ಅರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.