ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಬಾಯಿ ಆರೋಗ್ಯ ಮತ್ತು ದವಡೆ–ಮೊಗ ತಜ್ಞರ ಸಂಸ್ಥೆಯ (ಎಒಎಂಎಸ್‌ಐ) ಕರ್ನಾಟಕ ರಾಜ್ಯ ಘಟಕದ 12ನೇ ವಾರ್ಷಿಕ ಸಮ್ಮೇಳನ ನಗರದಲ್ಲಿ ಸೆ.13ರಿಂದ ಎರಡು ದಿನಗಳ ಕಾಲ ನಡೆಯಲಿದೆ ಎಂದು ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಹೇಳಿದರು.
‘ಎರಡು ದಿನಗಳ ಸಮ್ಮೇಳನ ನಗರದ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ. ಸೆ.13ರಂದು ಬೆಳಿಗ್ಗೆ 10.30ಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಉದ್ಘಾಟಿಸುವರು. ಗೌರವ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಪಾಲ್ಗೊಳ್ಳುವರು’ ಎಂದು ನಗರದ ಎಸ್.ನಿಜಲಿಂಗಪ್ಪ ದಂತವೈದ್ಯಕೀಯ ವಿಜ್ಞಾನಗಳ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಎಒಎಂಎಸ್‌ಐನ ರಾಷ್ಟ್ರೀಯ ಕಾರ್ಯದರ್ಶಿ ಡಾ.ಜಿ.ಎಸ್.ಗಿರಿರಾವ್ ಪಾಲ್ಗೊಳ್ಳುವರು. ಎರಡು ದಿನಗಳ ಅವಧಿಯಲ್ಲಿ ತಜ್ಞ ವೈದ್ಯರಿಂದ ವಿಶೇಷ ಉಪನ್ಯಾಸಗಳು, ಪ್ರಬಂಧಗಳ ಮಂಡನೆ ನಡೆಯಲಿದೆ. ಇದಕ್ಕೂ ಮೊದಲು ಸೆ.12ರಂದು ಪೂರ್ವ ಸಮ್ಮೇಳನ ಸಮಾರಂಭ ನಡೆಯಲಿದೆ’ ಎಂದರು.
‘ಹೆಸರಾಂತ ತಜ್ಞ ವೈದ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, 80 ಇ–ಪೋಸ್ಟರ್‌ಗಳು ಹಾಗೂ 100 ಪ್ರಬಂಧಗಳನ್ನು ಪ್ರಸ್ತುತಪಡಿಸಲಿದ್ದಾರೆ. ನಿಜಲಿಂಗಪ್ಪ ದಂತ ವೈದ್ಯಕೀಯ ಕಾಲೇಜಿನಿಂದ 15 ಪೇಪರ್‌ಗಳನ್ನು ಪ್ರಸ್ತುತಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.
‘ಮುಖದ ಆಘಾತ ನಿರ್ವಹಣೆ, ಸೀಳುತುಟಿ, ಅಂಗುಳಿನ ದುರಸ್ತಿ, ಓರಲ್ ಅಂಕಾಲಜಿ ಕುರಿತು ಈ ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ಜೊತೆಗೆ ಈ ಸಂಬಂಧಿತ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನ, ಉಪಕರಣಗಳು ಹಾಗೂ ಔಷಧಗಳನ್ನು ಪ್ರದರ್ಶಿಸಲು 25 ಮಳಿಗೆಗಳನ್ನು ತೆರೆಯಲಿವೆ. ಸದ್ಯ ಸಮ್ಮೇಳನಕ್ಕೆ 350 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಸಮ್ಮೇಳನದ ಹೊತ್ತಿಗೆ ಹೆಚ್ಚುವರಿಯಾಗಿ 100ರಿಂದ 150 ಜನರ ನೋಂದಣಿ ನಿರೀಕ್ಷಿಸಲಾಗಿದೆ’ ಎಂದರು.
ಅನೀಲಕುಮಾರ ಪಟ್ಟಣ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್‌ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಪಾಟೀಲ, ಡಾ.ಕಿರಣ ದೇಶಮುಖ, ಪ್ರಾಚಾರ್ಯೆ ಜಯಶ್ರೀ ಮುದ್ದಾ ಇದ್ದರು.
‘ತ್ವರಿತ ಚಿಕಿತ್ಸೆಗೆ ಫಾಸ್ಟ್‌ಟ್ರ್ಯಾಕ್ ಕ್ಲಿನಿಕ್’
ನಿಜಲಿಂಗಪ್ಪ ದಂತವೈದ್ಯಕೀಯ ವಿಜ್ಞಾನ ಕಾಲೇಜಿನಿಂದ ಕಲ್ಯಾಣ ಭಾಗದ ರೋಗಿಗಳ ತ್ವರಿತ ಚಿಕಿತ್ಸೆಗೆ ಫಾಸ್ಟ್‌ಟ್ರ್ಯಾಕ್ ಕ್ಲಿನಿಕ್ ಆರಂಭಿಸಲಾಗಿದೆ. ಇದರಿಂದ ವಿವಿಧ ಬಗೆಯ ದಂತ ಸಮಸ್ಯೆಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಶಶೀಲ್ ನಮೋಶಿ ಹೇಳಿದರು.
‘1986ರಲ್ಲಿ ಶುರುವಾರ ಈ ದಂತವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಸದ್ಯ 6 ಪಿ.ಜಿ.ಕೋರ್ಸ್‌ಗಳಿವೆ. ಐದು ಪಿಎಚ್.ಡಿ ಪ್ರೊಗ್ರಾಂ ನಡೆಸಲಾಗುತ್ತಿದೆ. ಇನ್ನೊಂದು ಪಿ.ಜಿ.ಕೋರ್ಸ್ ಆರಂಭಕ್ಕೆ ಅನುಮತಿ ಕೇಳಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.