ADVERTISEMENT

ದರ್ಗಾ ಚೌಕ್‌ ಮುಖ್ಯರಸ್ತೆ ವಿಸ್ತರಣೆಗೆ ಒಪ್ಪಿಗೆ: ಬಿ.ಆರ್.ಪಾಟೀಲ

ಆಳಂದ: ಪುರಸಭೆ ಪ್ರಗತಿ ಪರಿಶೀಲನಾ ಸಭೆ, ತ್ರಿಚಕ್ರ ವಾಹನ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:53 IST
Last Updated 17 ಜೂನ್ 2025, 15:53 IST
ಆಳಂದ ಪುರಸಭೆಯಲ್ಲಿ ತ್ರಿಚಕ್ರ ವಾಹನ ವಿತರಿಸಿ ಫಲಾನುಭವಿಗಳ ಜತೆ ಬಿ.ಆರ್.ಪಾಟೀಲ, ಫೌಜಿಯಾ ತರನ್ನುಮ್‌, ಫಿರ್ದೋಶಿ ಅನ್ಸಾರಿ ವಾಹನ ಸವಾರಿ ಮಾಡಿ ಚಾಲನೆ ನೀಡಿದರು
ಆಳಂದ ಪುರಸಭೆಯಲ್ಲಿ ತ್ರಿಚಕ್ರ ವಾಹನ ವಿತರಿಸಿ ಫಲಾನುಭವಿಗಳ ಜತೆ ಬಿ.ಆರ್.ಪಾಟೀಲ, ಫೌಜಿಯಾ ತರನ್ನುಮ್‌, ಫಿರ್ದೋಶಿ ಅನ್ಸಾರಿ ವಾಹನ ಸವಾರಿ ಮಾಡಿ ಚಾಲನೆ ನೀಡಿದರು   

ಆಳಂದ: ಪಟ್ಟಣದ ಹಳೆಯ ತಹಶೀಲ್ದಾರ್‌ ಕಚೇರಿಯಿಂದ ದರ್ಗಾ ಚೌಕ್‌ ಮುಖ್ಯರಸ್ತೆಯ ವಿಸ್ತರಣೆ ಕಾಮಗಾರಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು ₹4.90 ಕೋಟಿ ಅನುದಾನ ಮಂಜೂರಾಗಿದೆ. ಹಣ ಬಿಡುಗಡೆ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕರೂ ಆದ ರಾಜ್ಯ ಯೋಜನಾ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ತಿಳಿಸಿದರು.

ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ಮಂಗಳವಾರ ಪುರಸಭೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಪಕ್ಷಾತೀತವಾಗಿ ಪುರಸಭೆ ಸದಸ್ಯರು ಬಹುದಿನದಿಂದ ನನೆಗುದಿಗೆ ಬಿದ್ದ ರಸ್ತೆ ತೆರವು ಕಾರ್ಯಕ್ಕೆ ಬೇಡಿಕೆ ಇಡುತ್ತಿದ್ದಾರೆ. ಪಟ್ಟಣದ ಸೌಂದರ್ಯ ಹೆಚ್ಚಿಸಲು, ವಾಹನ ದಟ್ಟಣೆ ತಡೆಗಟ್ಟಲು ಮುಖ್ಯರಸ್ತೆ ತೆರವು ಅನಿವಾರ್ಯವಾಗಿದೆ. ಇದರಿಂದ ಪಟ್ಟಣದ ವ್ಯಾಪಾರ, ವ್ಯವಹಾರ ಹೆಚ್ಚಲಿದೆ’ ಎಂದರು.

ADVERTISEMENT

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿನ ಪುರಸಭೆಗೆ ಸಂಬಂದಿಸಿದ ವ್ಯಾಪಾರ ಮಳಿಗೆಗಳನ್ನು ನೆಲಸಮಗೊಳಿಸಿ, ಎರಡು ಅಂತಸ್ತಿನ ಸಂಕೀರ್ಣ ನಿರ್ಮಿಸುವ ಯೋಜನೆ ಇದೆ. ಇದಕ್ಕಾಗಿ ಅನುದಾನ ಒದುಗಿಸಲಾಗುವುದು. ಹೊಸ ಮಳಿಗೆಗಳ ನಿರ್ಮಾಣದಿಂದ ಪುರಸಭೆಗೂ ಹೆಚ್ಚಿನ ಆದಾಯ ಬರಲಿದೆ ಎಂದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಮಾತನಾಡಿ, ‘ಪಟ್ಟಣದಲ್ಲಿನ ಸ್ವಚ್ಛತೆ ಹಾಗೂ ಮಹಿಳಾ ಸಾರ್ವಜನಿಕ ಶೌಚಾಲಯಕ್ಕೆ ಪುರಸಭೆ ಅಧಿಕಾರಿಗಳು ಆದ್ಯತೆ ನೀಡಬೇಕು. ಸಮರ್ಪಕ ತ್ಯಾಜ್ಯ ವಿಲೇವಾರಿ ಕೈಗೊಳ್ಳದ ಕಾರಣ ಅಸ್ವಚ್ಛತೆ ಇದೆ. ಪುರಸಭೆ ಅಧಿಕಾರಿ ಹಾಗೂ ಪೌರಕಾರ್ಮಿಕರು ಸ್ವಚ್ಛತೆ ಕಾರ್ಯದಲ್ಲಿ ನಿರ್ಲಕ್ಷ ತೋರಿದರೆ ಕಠಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚೆರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ನೈರ್ಮಲ್ಯ ಅಧಿಕಾರಿ ರವಿಕಾಂತ ಮೀಸ್ಕಿನ್‌ ಅವರ ಕರ್ತವ್ಯಲೋಪದ ಬಗ್ಗೆ ಪುರಸಭೆ ಅಧ್ಯಕ್ಷ ಫಿರ್ದೋಶಿ ಅನ್ಸಾರಿ, ಸದಸ್ಯ ಲಕ್ಷ್ಮಣ ಝಳಕಿ, ಶ್ರೀಶೈಲ ಪಾಟೀಲ, ವಹೀದ್‌ ಜರ್ಧಿ ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣ ಶಾಸಕ ಬಿ.ಆರ್.ಪಾಟೀಲ ಅವರು ನಿರ್ಲಕ್ಷವಹಿಸಿದ ರವಿಕಾಂತ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಪುರಸಭೆಯಲ್ಲಿನ ಹಲವು ಅಧಿಕಾರಿ, ಸಿಬ್ಬಂದಿ ಬೇಜವಾಬ್ದಾರಿತನ ಹೆಚ್ಚಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರು ಕೇಳಿ ಬರುತ್ತಿವೆ. ಮಹಿಳಾ ಸದಸ್ಯರಾದ ರಾಜಶ್ರೀ ಖಜೂರಿ, ಅಸ್ಮೀತಾ ಚಿಟ್ಟಗುಪ್ಪಕರ್‌, ಪ್ರತಿಭಾ ಘನಾತೆ, ಸಂತೋಷ ವಾಲಿ, ಮೃತ್ಯಂಜಯ ಆಲೂರೆ ಅವರು ಸ್ವಚ್ಛತೆ ಕಾರ್ಯ ಕೈಗೊಳ್ಳದ ಕಾರಣ ವಾರ್ಡ್‌ ಗಳಲ್ಲಿ ದುರ್ನಾತ, ಅಸ್ವಚ್ಛತೆ ಕಾಣುತ್ತಿದೆ. ಸಿಬ್ಬಂದಿ ಸೂಕ್ತ ಮೇಲ್ವಿಚಾರಣೆ ಮಾಡುವದಿಲ್ಲ. ಪೌರಕಾರ್ಮಿಕರ ಮೇಲೆ ನಿಯಂತ್ರಣ ಇಲ್ಲದಾಗಿದೆ ಎಂದು ಆರೋಪಿಸಿದರು.

ನಗರ ಯೋಜನಾ ನಿರ್ದೇಶಕ ಮನ್ವರ್‌ ದೌಲಾ, ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ಪುರಸಭೆ ಅಧ್ಯಕ್ಷ ಪೀರ್ದೋಶಿ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ನಾಯಕ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಮುಖಂಡ ಸಿದ್ದರಾಮ ಪ್ಯಾಟಿ ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ತ್ರಿಚಕ್ರ ವಾಹನ ವಿತರಣೆ: ಇದಕ್ಕೂ ಮುನ್ನ ಪುರಸಭೆಯ ಎಸ್‌ಎಪ್‌ಸಿ ಯೋಜನೆಯಡಿ ಮಂಜೂರಾದ 7 ಜನ ಫಲಾನುಭವಿಗಳಿಗೆ ಶಾಸಕ ಬಿ.ಆರ್.ಪಾಟೀಲ, ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್‌ ಅವರು ತ್ರಿಚಕ್ರ ವಾಹನ ವಿತರಿಸಿದರು. ನಂತರ ಪಟ್ಟಣದ ಹೊರವಲಯದಲ್ಲಿನ ತ್ಯಾಜ್ಯ ವಿಲೇವಾರಿ ಘಟಕ, ವಿವಿಧೆಡೆ ಚರಂಡಿ ಸ್ವಚ್ಛತೆ ಕಾರ್ಯ, ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣ ಕಾಮಗಾರಿ ಮತ್ತು ಇಂದಿರಾ ಕ್ಯಾಂಟಿನ್‌ ಕಾಮಗಾರಿ ವಿಕ್ಷಿಸಿದರು. ಪುರಸಭೆ ಸದಸ್ಯರಾದ ಚಂದ್ರಕಾಂತ ನಡಗೇರಿ, ಅಮ್ಜದಲಿ ಕರ್ಜಗಿ, ಲಕ್ಷ್ಮಣ ಝಳಕಿ, ಶಿವಪುತ್ರ ನಡಗೇರಿ, ವಹೀದ್‌ ಜರ್ಧಿ, ಅಬ್ದುಲ್‌ ಚೌಸ್‌ , ಮೃತ್ಯುಂಜಯ ಆಲೂರೆ ಉಪಸ್ಥಿತರಿದ್ದರು.

ಆಳಂದ ಪಟ್ಟಣದಲ್ಲಿ ಹೊಸ ಬಸ್‌ ನಿಲ್ದಾಣ ಕಟ್ಟಡಕ್ಕೆ ₹5 ಕೋಟಿ ಮಂಜೂರಾಗಿದ್ದು ಟೆಂಡರ್‌ ಪ್ರಕ್ರಿಯೆ ಪೂರ್ಣವಾಗಿದೆ. ವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡಲು ಕಾಮಗಾರಿ ಕೈಗೊಳ್ಳಲಾಗುವುದು
ಬಿ.ಆರ್.ಪಾಟೀಲ, ಶಾಸಕ
ಆಳಂದ ಪಟ್ಟಣದಲ್ಲಿ ಬಳಕೆಯಲ್ಲಿ ಇಲ್ಲದ ಮಹಿಳಾ ಶೌಚಾಲಯಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಆರಂಭಿಸಬೇಕು. ವಿವಿಧ ವಾರ್ಡ್‌ಗಳಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ವಾರದಲ್ಲಿ ವರದಿ ನೀಡಿ
ಫೌಜಿಯಾ ತರನ್ನುಮ್‌, ಜಿಲ್ಲಾಧಿಕಾರಿ
ಆಳಂದ ಪಟ್ಟಣದಲ್ಲಿ ಮನೆ ನಿರ್ಮಾಣ ಖರೀದಿ ಮುಟ್ಯೇಷನ್‌ ಮಾಡಲು ಅರ್ಜಿದಾರರಿಗೆ ಸತಾಯಿಸಲಾಗುತ್ತಿದೆ. ಪುರಸಭೆಯಲ್ಲಿ ಹಣವಸೂಲಿ ಹೆಚ್ಚಿದ್ದು ಸಾರ್ವಜನಿಕರ ಕುಂದುಕೊರತೆಗೆ ಸ್ಪಂದನೆ ಮಾಡುತ್ತಿಲ್ಲ
ಶ್ರೀಶೈಲ ಪಾಟೀಲ, ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.