ADVERTISEMENT

ಚಿ.ಸಿ. ನಿಂಗಣ್ಣಗೆ ಅರಸು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:26 IST
Last Updated 19 ಆಗಸ್ಟ್ 2022, 15:26 IST
ಚಿ.ಸಿ. ನಿಂಗಣ್ಣ
ಚಿ.ಸಿ. ನಿಂಗಣ್ಣ   

ಕಲಬುರಗಿ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿರುವ ವ್ಯಕ್ತಿ, ಸಂಘ ಸಂಸ್ಥೆಗಳಿಗೆ ನೀಡುವ ಜಿಲ್ಲಾ ಮಟ್ಟದ ದೇವರಾಜ ಅರಸು ಪ್ರಶಸ್ತಿಗೆ ಸಾಹಿತಿ, ಸೇಂಟ್ ಜೋಸೆಫ್ ಪಿಯು ಕಾಲೇಜಿನ ಉಪನ್ಯಾಸಕ ಡಾ. ಚಿ.ಸಿ. ನಿಂಗಣ್ಣ ಆಯ್ಕೆಯಾಗಿದ್ದಾರೆ.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ನಿಂಗಣ್ಣ ಅವರನ್ನು ಆಯ್ಕೆ ಮಾಡಲಾಯಿತು.

ಈ ಮೂಲಕ ಜಿಲ್ಲಾಮಟ್ಟದ ಅರಸು ಅವರ ಹೆಸರಿನ ಪ್ರಥಮ ಪ್ರಶಸ್ತಿಯು ನಿಂಗಣ್ಣ ಅವರಿಗೆ ಒಲಿದಿದೆ. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ವೆಂಕಟೇಶ ಯಾದವ್, ಸದಸ್ಯರಾದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ, ಜಿಲ್ಲಾ ಬಿಸಿಎಂ ಅಧಿಕಾರಿ ಮಹಿಮೂದ್ ಹಾಜರಿದ್ದರು.

ADVERTISEMENT

ನಿಂಗಣ್ಣ ಕನ್ನಡ ಸಾಹಿತ್ಯದ ಚಂಪೂ, ವಚನ, ಸಂಶೋಧನೆ, ಜಾನಪದ, ವಿಮರ್ಶೆ, ಚರಿತ್ರೆ, ಸಂಪಾದನೆ ಕುರಿತು ಒಟ್ಟು 35 ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ವ್ಯಾಕರಣ, ಛತ್ರಪತಿ ಶಿವಾಜಿ, ಹಬ್ಬಗಳು, ಸ್ಪಂದನ, ಬಡವರ ಬಂಗಾರ, ಡಿ. ದೇವರಾಜ ಅರಸು, ಜಾಗತೀಕರಣ ಜಾನಪದ, ಜಾನಪದ ಸಾಹಿತ್ಯ ಸಂಗಾತಿ, ಜಾಗತೀಕರಣ ಜಾತ್ರೆಗಳು, ಕಡಗೀಲು ಬಂಡಿಗಾಧಾರ, ವೈಚಾರಿಕತೆ ಮತ್ತು ಸಾಹಿತ್ಯ, ಕನ್ನಡ ಸಂಸ್ಕೃತಿಕೋಶ, ಸಮಾಜವಾದಿ ಎಸ್. ಬಂಗಾರಪ್ಪ, ಸಾವಿತ್ರಿಬಾಯಿ ಫುಲೆ, ದಯಾನಂದ ಶಿವಯೋಗಿ, ಕುರುಬರ ಆಚರಣೆಗಳು, ಜಾನಪದ ದರ್ಪಣ, ಸಂಸ್ಕೃತಿ ಮತ್ತು ಜಾನಪದ, ನಮ್ಮೂರು ಜಾನಪದ ಪ್ರಮುಖ ಕೃತಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.