ADVERTISEMENT

ಬಿಳಿಜೋಳಕ್ಕೆ ಸೈನಿಕ ಹುಳು ಕಾಟ: ಔಷಧದಿಂದ ನಿಯಂತ್ರಣಕ್ಕೆ ಬಾರದ ರೋಗ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 15:20 IST
Last Updated 18 ಡಿಸೆಂಬರ್ 2023, 15:20 IST
ಎರಡು ಎಕರೆ ಜಮೀನು ಪೂರ್ತಿ ಸೈನಿಕ ಹುಳು ಜೋಳದ ಎಲೆ ತಿಂದು ಹಾಕಿರುವುದು
ಎರಡು ಎಕರೆ ಜಮೀನು ಪೂರ್ತಿ ಸೈನಿಕ ಹುಳು ಜೋಳದ ಎಲೆ ತಿಂದು ಹಾಕಿರುವುದು   

ಯಡ್ರಾಮಿ: ಉತ್ತರ ಕರ್ನಾಟಕದ ಪ್ರಮುಖ ಬೆಳೆ ಜೋಳ ಸೈನಿಕ ಹುಳಗಳ ಕಾಟದಿಂದ ಒಣಗಲಾರಂಭಿಸಿದ್ದು, ಮೊದಲೇ ಬರಗಾಲಕ್ಕೆ ತುತ್ತಾಗಿರುವ ಅನ್ನದಾತರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಮುಂಗಾರು, ಹಿಂಗಾರು ಎರಡೂ ಬೆಳೆ ಕೈಕೊಟ್ಟಿದ್ದು, ಇನ್ನೊಂದೆಡೆ ಕಾಲುವೆ ನೀರು ಸಹ ಅಷ್ಟಾಗಿ ಸಾಕಾಗುತ್ತಿಲ್ಲ. ಇದರಿಂದ ತೊಗರಿ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಹಾಳಾಗಿವೆ. ಅಲ್ಪಸ್ವಲ್ಪ ಆಗಿದ್ದ ಮಳೆಗೆ ಬಿತ್ತಿದ್ದ ಜೋಳವಾದರೂ ಕೈ ಹಿಡಿಯುತ್ತದೆ ಎಂಬ ಆಶಾಭಾವನೆ ರೈತರಲ್ಲಿತ್ತು. ಆದರೆ ಈಗ ಅದು ಸಹ ಕೈಗೆ ಸಿಗಲ್ಲ ಎಂದು ಆತಂಕಗೊಂಡಿದ್ದಾರೆ.

ಹೈನುಗಾರಿಕೆಗೂ ಪೆಟ್ಟು: ತೀವ್ರ ಬರದಿಂದ ಕಂಗೆಟ್ಟಿರುವ ರೈತರು ಹೈನುಗಾರಿಕೆಯಲ್ಲಾದರೂ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದುಕೊಂಡರೆ, ಆ ಜಾನುವಾರುಗಳಿಗೆ ಮೇವು ಬೇಕು. ಈಗ ಜಾನುವಾರುಗಳಿಗೂ ಮೇವು ಸಿಗದ ಸ್ಥಿತಿ ಬಂದೊದಗಿದೆ ಎನ್ನುತ್ತಾರೆ ರೈತರು.

ADVERTISEMENT

ಗರಿ, ಸಸಿ ತಿನ್ನುವ ಕೀಟ: ಸೈನಿಕ ಹುಳಗಳ ಕಾಟದಿಂದ ಜೋಳ ರೈತರ ಕೈಸೇರದಂತಾಗಿದೆ. ಜೋಳದ ಗರಿಗಳು ಹಾಗೂ ಸಸಿಗಳನ್ನು ಹುಳುಗಳು ತಿಂದು ಹಾಕುತ್ತಿವೆ. ಇದರಿಂದ ಬೆಳೆ ಹಾಳಾಗುತ್ತಿದ್ದು, ಯಾವುದೇ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಮುಂದೇನೂ ಮಾಡಬೇಕು ಎಂದು ರೈತರು ಚಿಂತೆಗೆ ಒಳಗಾಗಿದ್ದಾರೆ.

ಪರಿಹಾರ ನಿರೀಕ್ಷೆ: ಈ ಹಿಂದೆ ಕಬ್ಬು, ತೊಗರಿ, ಸಜ್ಜೆ, ಹತ್ತಿ, ಮಕ್ಕೆಜೋಳ ಇತರೆ ಬೆಳೆಗಳು ಹಾನಿಯಾಗಿವೆ. ಇತ್ತೀಚಿಗೆ ಸರ್ಕಾರ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡುವುದಾಗಿ ಹೇಳುತ್ತಿದೆ. ಸದ್ಯ ಬಿಳಿಜೋಳ ಸಹ ಕೈಕೊಡುವ ಲಕ್ಷಣಗಳಿದ್ದು, ರೈತರಿಗೆ ಶೀಘ್ರವಾಗಿ ಪರಿಹಾರ ನೀಡಲಿ ಎನ್ನುತ್ತಾರೆ ರೈತರು. 

ಸಂಗನಗೌಡ
ಶಾಂತಗೌಡ

ರೈತರ ಸಂಕಷ್ಟ ಈ ಬಾರಿ ತೀವ್ರಗೊಂಡಿದೆ. ಬಿಳಿಜೋಳಕ್ಕೆ ಕೀಟ ಬಾಧೆ ಹೆಚ್ಚುತ್ತಲೇ ಇದ್ದು ಸರ್ಕಾರ ಶೀಘ್ರವಾಗಿ ಹಿಂದಿನ ಹಾಗೂ ಪ್ರಸ್ತುತ ಬೆಳೆ ಹಾನಿಯ ಪರಿಹಾರ ನೀಡಬೇಕು

– ಸಂಗನಗೌಡ ಬಿರಾದಾರ ಕುರಳಗೇರಾ ಗ್ರಾಮದ ರೈತ

ಎಮಾಮೆಕ್ಟಿನ್ ಬೆಂಜೋಯೇಟ್ ಪ್ರತಿ ಲೀಟರ್‌ಗೆ 0.5 ಗ್ರಾಂ ಸಿಂಪಡಣೆ ಮಾಡಬೇಕು. ಒಂದು ವೇಳೆ ಹುಳು ನಿಯಂತ್ರಣಕ್ಕೆ ಬರದೆ ಇದ್ದಲ್ಲಿ ಸಂಶೋಧಕರನ್ನು ಕರೆಸಬೇಕು

- ಶಾಂತಗೌಡ ಕೃಷಿ ಅಧಿಕಾರಿ ಯಡ್ರಾಮಿ

ತೊಗರಿ ನೆಟೆ ರೋಗದ ಪರಿಹಾರ ಕೆಲವು ರೈತರಿಗೆ ಸಿಕ್ಕಿದೆ. ಉಳಿದ ರೈತರಿಗೂ ₹2160 ಪ್ರತಿ ಎಕರೆಗೆ ಪರಿಹಾರಧನ ಸಿಗಲಿದೆ

– ಶರಣಗೌಡ ಎಡಿ ಜೇವರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.