ADVERTISEMENT

ಕಲಾವಿದರಿಗೆ ಸೂಕ್ಷ್ಮ ಸಂವೇದನೆ ಅಗತ್ಯ: ಬಸವರಾಜ ಎಲ್.ಜಾನೆ

ಕಲಾವಿದರಾದ ಬಸವರಾಜ ಎಲ್‌.ಜಾನೆ, ಕೂಡಲಯ್ಯ ಹಿರೇಮಠಕ್ಕೆ ದೃಶ್ಯಭೂಷಣ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:51 IST
Last Updated 28 ಸೆಪ್ಟೆಂಬರ್ 2021, 3:51 IST
ಕಲಬುರ್ಗಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಾದ ಬಸವರಾಜ ಎಲ್.ಜಾನೆ, ಕೂಡಲಯ್ಯ ಹಿರೇಮಠ ಅವರಿಗೆ ದೃಶ್ಯಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾರ್ಯದರ್ಶಿ ಡಾ.ವಿ.ಜಿ.ಅಂದಾನಿ, ದಿ ಐಡಿಯಲ್ ಫೈನ್ ಆರ್ಟ್ ಕಾಲೇಜಿನ ಪ್ರಾಂಶುಪಾಲ ಕೆ.ಎಂ. ಲೋಕಯ್ಯ, ಸೊಸೈಟಿ ಅಧ್ಯಕ್ಷ ರಾಜಶೇಖರ ಕೆ.ಪಾಟೀಲ, ಎಂಎಂಕೆ ದೃಶ್ಯಕಲಾ ಕಾಲೇಜಿನ ಪ್ರಾಂಶುಪಾಲ ಶೇಷಿರಾವ ಬಿರಾದಾರ ಇದ್ದಾರೆ
ಕಲಬುರ್ಗಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಾದ ಬಸವರಾಜ ಎಲ್.ಜಾನೆ, ಕೂಡಲಯ್ಯ ಹಿರೇಮಠ ಅವರಿಗೆ ದೃಶ್ಯಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾರ್ಯದರ್ಶಿ ಡಾ.ವಿ.ಜಿ.ಅಂದಾನಿ, ದಿ ಐಡಿಯಲ್ ಫೈನ್ ಆರ್ಟ್ ಕಾಲೇಜಿನ ಪ್ರಾಂಶುಪಾಲ ಕೆ.ಎಂ. ಲೋಕಯ್ಯ, ಸೊಸೈಟಿ ಅಧ್ಯಕ್ಷ ರಾಜಶೇಖರ ಕೆ.ಪಾಟೀಲ, ಎಂಎಂಕೆ ದೃಶ್ಯಕಲಾ ಕಾಲೇಜಿನ ಪ್ರಾಂಶುಪಾಲ ಶೇಷಿರಾವ ಬಿರಾದಾರ ಇದ್ದಾರೆ   

ಕಲಬುರ್ಗಿ: ‘ಕಲಾ ಕ್ಷೇತ್ರವನ್ನು ತಿರಸ್ಕಾರ ಭಾವದಿಂದ ನೋಡಿದರೆ ಬೆಳೆಯಲು ಸಾಧ್ಯವಿಲ್ಲ. ಒಮ್ಮೆ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಅದರಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದು ಕಲಾವಿದ ಬಸವರಾಜ ಎಲ್.ಜಾನೆ ಹೇಳಿದರು.

ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿಯಿಂದ ಏರ್ಪಡಿಸಿದ್ದ ‘ದೃಶ್ಯಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತರಗತಿಯಲ್ಲಿ ಕುಳಿತರೆ ಕಲಾವಿದರಾಗಿ ಬೆಳೆಯಲು ಸಾಧ್ಯವಿಲ್ಲ. ಅದರ ಬದಲಿಗೆ ನಮ್ಮ ಹೊರಗಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಿರಿಯ ಕಲಾವಿದರೊಂದಿಗೆ ಚರ್ಚೆ ಮಾಡಬೇಕು. ನಮ್ಮ ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಸಂವೇದನೆ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಯಾವುದೇ ಒಂದು ಗಿಡ ಬೆಳೆದು ಹೂವು, ಹಣ್ಣು ನೀಡಲು ಅದಕ್ಕೆ ಪೋಷಣೆ ತುಂಬಾ ಮುಖ್ಯ. ಅದೇ ರೀತಿ ನಾನು ಕಲಾವಿದನಾಗಿ ಬೆಳೆಯಲು ವಿ.ಜಿ.ಅಂದಾನಿ ಸೇರಿದಂತೆ ಸಾಕಷ್ಟು ಕಲಾವಿದರು ಪೋತ್ಸಾಹ ನೀಡಿದ್ದಾರೆ’ ಎಂದರು.

ಪುಣೆಯ ಕಲಾವಿದ ಕೂಡಲಯ್ಯ ಹಿರೇಮಠ ಮಾತನಾಡಿ, ‘ನನ್ನ ತಂದೆ ಕಲಾ ಶಿಕ್ಷಕರಾಗಿದ್ದರು. ಮನೆಯಲ್ಲಿ ಅವರು ಕಲಾಕೃತಿಗಳನ್ನು ರಚಿಸುತ್ತಿದ್ದರು. ಆದರೆ, ಅವು ಮಾರಾಟವಾಗುತ್ತಿರಲಿಲ್ಲ. ಆದರೂ ಅವರು ತಮ್ಮ ಕೆಲಸವನ್ನು ಬಿಡುತ್ತಿರಲಿಲ್ಲ. ಅವರ ಕರ್ತವ್ಯನಿಷ್ಠೆ ನನಗೆ ಕಲಾವಿದನಾಗಲು ಪ್ರೇರಣೆಯಾಯಿತು’ ಎಂದರು.

‘ದಿ ಐಡಿಯಲ್ ಫೈನ್ ಆರ್ಟ್ ಕಾಲೇಜಿನಲ್ಲಿ ಉತ್ತಮ ಶಿಕ್ಷಣ, ಮಾರ್ಗದರ್ಶನ ಸಿಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಉನ್ನತಮಟ್ಟದ ಕಲಾವಿದರಾಗಿ ಬೆಳೆಯಬೇಕು’ ಎಂದರು.

ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿಯ ಅಧ್ಯಕ್ಷ ರಾಜಶೇಕರ ಕೆ.ಪಾಟೀಲ ಮಾತನಾಡಿ, ‘ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಹೀಗಾಗಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಪ್ರಶಸ್ತಿ ನೀಡಲಾಗುತ್ತಿದೆ. ಕಲಾವಿದರಿಂದ ಮಾತ್ರ ಹೊಸತನ ಸೃಷ್ಟಿ ಸಾಧ್ಯ’ ಎಂದರು.

‘ಬೆಂಗಳೂರು ಬಿಟ್ಟರೆ ಉಳಿದ ಕಡೆ ಇರುವ ದೃಶ್ಯಕಲಾ ಕಾಲೇಜುಗಳಿಗೆ ಆರ್ಥಿಕ ಶಕ್ತಿ ಇಲ್ಲ. ಶಿಕ್ಷಕರಿಗೂ ಸರಿಯಾಗಿ ವೇತನ ಸಿಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಸೊಸೈಟಿ ವತಿಯಿಂದ ಮಾತನಾಡಲಾಗಿದೆ. 2022–23ನೇ ಸಾಲಿನಿಂದ ಸೊಸೈಟಿಯಿಂದ ಹೊಸ ಕೋರ್ಸ್ ಆರಂಭಿಸಲಾಗುವುದು’ ಎಂದರು.

ಕಲಬುರ್ಗಿಯ ಕಲಾವಿದ ಬಸವರಾಜ ಎಲ್.ಜಾನೆ ಅವರಿಗೆ 2021ನೇ ಸಾಲಿನ ‘ದೃಶ್ಯಭೂಷಣ’ ಮತ್ತು ಪುಣೆಯ ಕೂಡಲಯ್ಯ ಹಿರೇಮಠ ಅವರಿಗೆ ಕಲಾವಿದ ದಿವಂಗತ ಎಂ.ಬಿ.ಪಾಟೀಲ ಸ್ಮರಣಾರ್ಥ ನೀಡಲಾಗುವ ‘ದೃಶ್ಯಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

ಚಂದ್ರಹಾಸ ವೈ.ಜಾಲಿಹಾಳ ಕಾರ್ಯಕ್ರಮ ನಿರೂಪಿಸಿದರು. ಗಂಗಮ್ಮ ವಾಲಿಕಾರ ಪ್ರಾರ್ಥಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.