ಕಲಬುರಗಿ: ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಮಾಸಿಕ ₹10 ಸಾವಿರ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಕಾರ್ಮಿಕ ಸಂಘಟನೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಬುಧವಾರವೂ ಮುಂದುವರಿಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಐವಾನ್–ಎ–ಶಾಹಿ ರಸ್ತೆಯಲ್ಲಿ ನಡೆಸುತ್ತಿರುವ ಧರಣಿಯಲ್ಲಿ ಬುಧವಾರ ದಿನವಿಡೀ ನಾಯಕರ ಭಾಷಣಗಳು, ಕ್ರಾಂತಿಗೀತೆಗಳು, ಜಾನಪದ ಗೀತೆಗಳು, ದೇಶಭಕ್ತಿ ಗೀತೆಗಳು, ಪ್ರಗತಿಪರ ವಿಷಯ ವಸ್ತುಗಳುಳ್ಳ ಗೀತೆಗಳು ಮೊಳಗಿದವು. ಸರ್ಕಾರ ವಿರುದ್ಧ ಘೋಷಣೆಗಳನ್ನೂ ಕೂಗಲಾಯಿತು.
ಅಲ್ಲದೇ, ಎಐಡಿವೈಒ ಸಂಘಟನೆಯ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಎಐಕೆಎಸ್ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡ್ಯಾಳ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಉಮಾಪತಿ ಮಾಲಿಪಾಟೀಲ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಮುಖಂಡೆ ಅಶ್ವಿನಿ ಆಶಾಕಾರ್ಯಕರ್ತರ ಹೋರಾಟಕ್ಕೆ ಶಕ್ತಿ ತುಂಬಿದರು.
ಕಲಬುರಗಿ ನಗರ ಸೇರಿದಂತೆ ಆಳಂದ, ಅಫಜಲಪುರ, ಜೇವರ್ಗಿ, ಸೇಡಂ, ಚಿತ್ತಾಪುರ, ಚಿಂಚೋಳಿ, ಕಾಳಗಿ, ಕಮಲಾಪುರ, ಆಳಂದ, ಯಡ್ರಾಮಿ, ಶಹಾಬಾದ್ ತಾಲ್ಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಬಂದಿರುವ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬುಧವಾರ ರಾತ್ರಿಯೂ ಧರಣಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
ಧರಣಿ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮುಖಂಡರಾದ ವಿ.ಜಿ.ದೇಸಾಯಿ, ಎಸ್.ಎಂ.ಶರ್ಮಾ, ಶಿವಲಿಂಗಮ್ಮ, ಗೀತಾ ಮಳ್ಳಿ, ಸಂಗೀತಾ, ರಾಘವೇಂದ್ರ ಎಂ.ಜಿ. ಸಂತೋಷ ಹಿರವೇ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
‘ಆಶಾ’ ಆಸ್ಪತ್ರೆಗೆ ದಾಖಲು
ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಆಶಾ ಕಾರ್ಯಕರ್ತೆ ಮಾಣಿಕಮ್ಮ ಅವರು ಬುಧವಾರ ಬೆಳಿಗ್ಗೆ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ‘ಅವರ ರಕ್ತದೊತ್ತಡ ಏರುಪೇರಾಗಿದೆ. ರಕ್ತದಲ್ಲಿನ ಹಿಮೊಗ್ಲೊಬಿನ್ ಮಟ್ಟ ಕುಸಿದಿದ್ದು ಎರಡ್ಮೂರು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ಕುಳಿತರೂ ಸ್ಪಂದಿಸದ ಸರ್ಕಾರಕ್ಕೆ ನಾಚಿಕೆಯೇ ಇಲ್ಲ.-ಗಣಪತರಾವ್ ಮಾನೆ ಎಐಕೆಕೆಎಂಸ್ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.