ADVERTISEMENT

ಅನುಭವಕ್ಕೆ ದಕ್ಕಿದ ಕಲಾಕೃತಿ ರಚಿಸಿ; ಬಸವರಾಜ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 6:47 IST
Last Updated 28 ನವೆಂಬರ್ 2022, 6:47 IST
ಕಲಬುರಗಿಯ ರಂಗಾಯಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕಲಾವಿದರಾದ ಅಜಯಕುಮಾರ ಕಲ್ಲಗುಡಿ, ಹಣಮಂತ ಹರ್ಲಾಪುರ, ಸೂರ್ಯಕಾಂತ ನಂದೂರ, ಬಸವರಾಜ ಎಲ್.ಜಾನೆ, ಎಸ್ ಮಧುಸೂದನ್, ಗಾಯತ್ರಿ ಮಂತ ಮತ್ತು ಜಾಸ್ಮಿನ ಕೌರ್‌ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ.ಪಿ ಪರಶುರಾಮ. ಆರ್‌.ಎಚ್‌.ಕುಲಕರ್ಣಿ, ಡಾ.ಜೆ.ಎಸ್‌.ಖಂಡೇರಾವ, ಪ್ರಭಾಕರ ಜೋಶಿ, ಡಾ.ಅಪ್ಪಗೆರೆ ಸೋಮಶೇಖರ್, ಬಿ. ನಯನಾ ಇದ್ದರು
ಕಲಬುರಗಿಯ ರಂಗಾಯಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕಲಾವಿದರಾದ ಅಜಯಕುಮಾರ ಕಲ್ಲಗುಡಿ, ಹಣಮಂತ ಹರ್ಲಾಪುರ, ಸೂರ್ಯಕಾಂತ ನಂದೂರ, ಬಸವರಾಜ ಎಲ್.ಜಾನೆ, ಎಸ್ ಮಧುಸೂದನ್, ಗಾಯತ್ರಿ ಮಂತ ಮತ್ತು ಜಾಸ್ಮಿನ ಕೌರ್‌ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ.ಪಿ ಪರಶುರಾಮ. ಆರ್‌.ಎಚ್‌.ಕುಲಕರ್ಣಿ, ಡಾ.ಜೆ.ಎಸ್‌.ಖಂಡೇರಾವ, ಪ್ರಭಾಕರ ಜೋಶಿ, ಡಾ.ಅಪ್ಪಗೆರೆ ಸೋಮಶೇಖರ್, ಬಿ. ನಯನಾ ಇದ್ದರು   

ಕಲಬುರಗಿ:‘ಕಲಾವಿದರನ್ನು ಆರಂಭದಲ್ಲಿ ಅನುಮಾನದಿಂದ ಕಂಡು, ಅಪಮಾನ ಮಾಡಿದ ಸಮಾಜವೇ ಮುಂದೊಂದು ದಿನ ಅವರನ್ನು ಕರೆದು ಗೌರವಿಸಿ, ಸನ್ಮಾನಿಸುತ್ತದೆ’ ಎಂದು ಹಿರಿಯ ಚಿತ್ರಕಲಾವಿದ ಬಸವರಾಜ ಎಲ್‌. ಜಾನೆ ಹೇಳಿದರು.

ಇಲ್ಲಿನ ರಂಗಾಯಣದಲ್ಲಿ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿ
ಯಿಂದ 3 ದಿನಗಳಿಂದ ರಾಷ್ಟ್ರಮಟ್ಟದ ಕಲಾ ಪ್ರದರ್ಶನ, ಕಲಾ ಶಿಬಿರ, ದೃಶ್ಯೋಪನ್ಯಾಸ ಆಯೋಜಿಸಲಾಗಿದ್ದು, ಭಾನು
ವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೃಶ್ಯ ಬೆಳಕು ಗೌರವ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

‘ಕಲಾವಿದ ಮಂಜುಗಡ್ಡೆಯಂತೆ ಕರಗುವ ಶಾಂತತೆಯ ಮನೋಭಾವ, ಸ್ನೇಹಮಯಿ ಗುಣ, ಹೃದಯ ಸಿರಿವಂತಿಕೆ ಮತ್ತು ತೃಪ್ತಿದಾಯಕವಾದ ಮನಸ್ಥಿತಿ ಹೊಂದಿರಬೇಕು. ಸುಖ ಸುಮ್ಮನೆ ಬೇಡದ ಚಿತ್ರಗಳನ್ನು ಬಿಡಿಸಿ ಸಮಯ ವ್ಯರ್ಥ ಮಾಡುವುದಕ್ಕಿಂತ, ಅನುಭವ ಮತ್ತು ಅನುಭೂತಿಗೆ ದಕ್ಕಿದ ಅತ್ಯುತ್ತಮ ಚಿತ್ರಗಳನ್ನೇ ರಚಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಬೇರೆಯವರಿಗಿಂತ ಕಲಾವಿದರಿಗೆ ಸಮಯ ಎಂಬುದು ಬಹು ಅಮೂಲ್ಯ. ಒಂದೇ ಕಲಾಕೃತಿಗೆ ಸಾಕಷ್ಟು ಸಮಯ, ಶ್ರಮ ವ್ಯಯವಾಗುತ್ತದೆ. ಬೇಗನೆ ಪ್ರಸಿದ್ಧಿ, ಪ್ರಚಾರ ಪಡೆಯುವ ಆಸೆಯಿಂದ ಏನನ್ನೋ ಚಿತ್ರಿಸಬಾರದು. ಮೂರುವರೆ ದಶಕಗಳಿಂದ ಕಲಾ ಸೇವೆಯಲ್ಲಿ ತೊಡಗಿದ್ದರಿಂದ ನನಗೆ ಈಗ ಪ್ರಶಸ್ತಿ, ಸನ್ಮಾನ, ಉಪನ್ಯಾಸದ ಆಹ್ವಾನಗಳು ಬರುತ್ತಿವೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್ ಮಾತನಾಡಿ, ‘ಕಲಾವಿದ, ಬರಹಗಾರರು ಸಾಮಾಜಿಕ ಬದ್ಧತೆಯಿಂದ ವರ್ತಮಾನದ ತಲ್ಲಣಗಳಿಗೆ ತಮ್ಮ ಕಾಯಕದ ಮೂಲಕ ಪ್ರತಿಕ್ರಿಯಿಸಬೇಕು’ ಎಂದು ಹೇಳಿದರು.

‘ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ನಮ್ಮನ್ನು ನಾವು ನೋಡಿಕೊಳ್ಳುವ ವಿವೇಕದ ಸಂಕೇತವಾಗಿ ದೃಶ್ಯಕಲೆಗಳು ನಮಗೆ ಕಾಣಿಸುತ್ತವೆ. ಇಂದಿನ ಜಗತ್ತು ಹಿಂಸೆ, ಕ್ರೌರ್ಯದ ಹಿಂದೆ ಬೆನ್ನು ಬಿದ್ದಿದೆ. ಕಲಾ ಪ್ರದರ್ಶನದಲ್ಲಿನ ಚಿತ್ರವೊಂದು ಪ್ರಾಣಿ–ಪಕ್ಷಗಳಿಗೂ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂಬುದನ್ನು ಸಾರಿದೆ. ಅದು ನಮ್ಮಲ್ಲಿ ಪರಿಸರದ ವಿವೇಕವನ್ನು ಎಚ್ಚರಿಸುತ್ತಿದೆ’ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಚಿತ್ರಕಲಾವಿದ ಡಾ. ಜೆ.ಎಸ್‌ ಖಂಡೇರಾವ, ದೃಶ್ಯಕಲಾ ಇತಿಹಾಸಕಾರ ಆರ್‌.ಎಚ್‌. ಕುಲಕರ್ಣಿ, ಸಂಸ್ಥೆಯ ಅಧ್ಯಕ್ಷ ಡಾ. ಪಿ.ಪರಶುರಾಮ, ಕಾರ್ಯದರ್ಶಿ ಬಿ.ನಯನಾ ಇದ್ದರು.

ವಾರ್ಷಿಕ ಕಲಾ ಪ್ರಶಸ್ತಿ ಪ್ರದಾನ

ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಚಿತ್ರಕಲಾವಿದ ಬಸವರಾಜ ಎಲ್.ಜಾನೆ ಅವರಿಗೆ ದೃಶ್ಯಬೆಳಕು ಗೌರವ ಪುರಸ್ಕಾರ ನೀಡಿ ಗೌರವಿಸಿತು.

ವಾರ್ಷಿಕ ಕಲಾ ಸ್ಪರ್ಧೆಯಲ್ಲಿ ಚಾಮರಾಜನಗರದ ಎಸ್. ಮಧುಸೂದನ್ ಅವರ ‘ಫಾಸ್ಟ್‌ ಅಪ್‌ಡೇಟ್’ ಅಕ್ರೆಲಿಕ್‌ ಕ್ಯಾನವಾಸ್‌, ಕಲಬುರಗಿಯ ಸೂರ್ಯಕಾಂತ ನಂದೂರ ಅವರ ‘ಇವು ಬಟ್ಟೆಗಳಲ್ಲ’ ಜಲವರ್ಣ, ದೆಹಲಿಯ ಜಾಸ್ಮಿನ ಕೌರ್ ಅವರ ‘ಅವಳ ಚಲಿಸುವ ಸೂಜಿ’ ಅಕ್ರೆಲಿಕ್‌, ಯಾದಗಿರಿಯ ಗಾಯತ್ರಿ ಮಂತ ಅವರ ‘ಶಿವ ಪಾರ್ವತಿ ಪೂಜೆ’ ಜಲವರ್ಣ, ಬಾಗಲಕೋಟೆಯ ಅಜಯಕುಮಾರ ಕಲ್ಲಗುಡಿ ಅವರ ‘ಭವಿಷ್ಯದ ಬೆಳವಣಿಗೆ’ ಲೋಹದ ಮಾಧ್ಯಮ ಮತ್ತು ಕೊಪ್ಪಳದ ಹಣಮಂತ ಹರ್ಲಾಪುರ ಅವರ ‘ನನ್ನಂತೆ ನೀ ಆಗದಿರು’ ಛಾಯಾಚಿತ್ರಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿದವು.

ಈ ಆರು ಕಲಾವಿದರಿಗೆ ವಾರ್ಷಿಕ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮನಗೆದ್ದ ಕಲಾಕೃತಿಗಳು

ರಾಜ್ಯದ ನಾನಾ ಜಿಲ್ಲೆ, ನೆರೆಯ ತೆಲಂಗಾಣ, ಮಹಾರಾಷ್ಟ್ರ, ಕೇರಳ, ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಕಲಾವಿದರ 75 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ವರ್ಣಚಿತ್ರ, ರೇಖಾ ಚಿತ್ರ, ಮಿಶ್ರಮಾಧ್ಯಮ, ಶಿಲ್ಪಕೆತ್ತನೆಗಳು ಆಕರ್ಷಕವಾಗಿದ್ದವು. ಜಲವರ್ಣ, ಡಿಜಿಟಲ್ ಮಾಧ್ಯಮ, ಅಕ್ರೆಲಿಕ್, ತೈಲವರ್ಣ, ನಿಸರ್ಗ, ಕಿರುರೂಪಕ ಕಲಾಕೃತಿಗಳು ಕಲಾವಿದರ ಪ್ರತಿಭೆಗೆ ಸಾಕ್ಷಿಯಾದವು. ಕಲಾವಿದ ಬಾಲಾಜಿ ಗಾಯಕವಾಡ್ ಅವರು ವರ್ಣಚಿತ್ರದಲ್ಲಿ ಚಿತ್ರಿಸಿದ್ದ ವಿವಿಧ ಧರ್ಮಗಳ ಚಿಹ್ನೆಗಳನ್ನು ನೇತುಹಾಕಿಕೊಂಡು ನಿಂತ ಮಕ್ಕಳ ದೃಶ್ಯವು ಕುವೆಂಪು ಅವರ, ‘ಹುಟ್ಟುವ ಪ್ರತಿ ಮಗುವು ವಿಶ್ವಮಾನವ. ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ’ ಎಂಬ ಸಂದೇಶ ಹೇಳುವಂತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.