ಕಲಬುರ್ಗಿ: ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಆಯುಷ್ ವೈದ್ಯರಾಗಿ ಕೆಲಸ ಮಾಡುತ್ತಿರುವವರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಆಯುಷ್ ವೈದ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಸಾಮೂಹಿಕ ರಾಜೀನಾಮೆ ಪತ್ರವನ್ನೂ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ‘ಪ್ರಪಂಚದಾದ್ಯಂತ ಕೋವಿಡ್–19 ಕಾಯಿಲೆ ಹರಡುತ್ತಿದ್ದು, ಕಾಯಲೆ ಉಲ್ಬಣಗೊಳ್ಳದಂತೆ ತಡೆಯಲು ಟೊಂಕಕಟ್ಟಿ ಶ್ರಮಿಸುತ್ತಿದ್ದೇವೆ. ಬಹುತೇಕ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳನ್ನು ಮುಚ್ಚಿದ್ದರೂ, ಮುಂದಿನ ಅಪಾಯವನ್ನು ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇವೆ. ಅನೇಕ ಬಾರಿ ಕಾಯಂಗೊಳಿಸುವಂತೆ ವಿನಂತಿಸಿದರೂ ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ. ಅನೇಕ ವರ್ಷಗಳಿಂದ ಸಂಚಿತ ವೇತನ ಹೊರತುಪಡಿಸಿ ಸರ್ಕಾರದಿಂದ ಸೇವಾ ಭದ್ರತೆ ಅಥವಾ ಇತರ ಸೌಲಭ್ಯಗಳು ಸಿಕ್ಕಿಲ್ಲ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ಆರ್ಥಿಕ ಭದ್ರತೆ ಇಲ್ಲದೇ ಕಂಗಾಲಾಗಿದ್ದೇವೆ. ಕೊರೊನಾ ಭೀಕರ ಕಾಯಿಲೆಯಾಗಿದ್ದು, ಎಲ್ಲವನ್ನೂ ಎದುರಿಸಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ, ಕಾಯಂ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜೀನಾಮೆ ಸ್ವೀಕರಿಸಿ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.