ADVERTISEMENT

ಕಲಬುರಗಿ: ನಿಲ್ದಾಣಕ್ಕೆ ಕಾಲಿಟ್ಟರೆ ದೇಶಭಕ್ತಿ ಉದ್ದೀಪನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:30 IST
Last Updated 12 ಆಗಸ್ಟ್ 2022, 5:30 IST
ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಒಂದು ವಾರ ನಡೆಯು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಗುರುವಾರ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಮತ್ತು ಡಿಸಿಪಿ ಅಡ್ಡೂರು ಶ್ರೀನಿವಾಸಲು ಚಾಲನೆ‌ ನೀಡಿದರು
ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಒಂದು ವಾರ ನಡೆಯು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಗುರುವಾರ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಮತ್ತು ಡಿಸಿಪಿ ಅಡ್ಡೂರು ಶ್ರೀನಿವಾಸಲು ಚಾಲನೆ‌ ನೀಡಿದರು   

ಕಲಬುರಗಿ: ಕಣ್ಣಿಗೆ ಮುದ ನೀಡುವ ದಿಪಾಲಂಕಾರ, ಹಿಂಪಾದ ಹಿನ್ನಲೆ ಧ್ವನಿಯ ದೇಶ ಭಕ್ತಿಗೀತೆಗಳ ಗಾಯನ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ರಾಷ್ಟ್ರೀಯ ನಾಯಕರ ವಿವಿಧ ಮಜಲುಗಳ ಭಾವಚಿತ್ರಗಳು ಕೇಂದ್ರ ಬಸ್ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕರಿಗೆ ದೇಶ ಭಕ್ತಿ ಉದ್ದೀಪನಗೊಳಿಸುತ್ತವೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೆಹಲಿಯ ಅಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡರ್‌ಟೇಕಿಂಗ್ಸ್ ಸಂಸ್ಥೆಯು ದೇಶದ 75 ಬಸ್ ನಿಲ್ದಾಣಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣವೂ ಸೇರಿದೆ. ಹೀಗಾಗಿ,ಕಲ್ಯಾಣ‌ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ(ಕೆಕೆಆರ್‌ಟಿಸಿ) ಅಧಿಕಾರಿಗಳು ಬಸ್‌ ನಿಲ್ದಾಣಕ್ಕೆ ಕಾಲಿಡುವ ಪ್ರತಿ ಪ್ರಯಾಣಿಕನಲ್ಲಿ ದೇಶ ಭಕ್ತಿ ಹೊತ್ತಿಸುವಂತಹ ವಾತಾವರಣ ಸೃಷ್ಟಿಸಿದ್ದಾರೆ.

ಪ್ರವೇಶ ದ್ವಾರಕ್ಕೆ ಬರುತ್ತಿದ್ದಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಮಾನು ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ಎರಡು ಬದಿ ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್‌ ನೆಹರೂ, ಲಾಲ್ ಬಹದೂರು ಶಾಸ್ತ್ರಿ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಸಂಗೋಳಿ ರಾಯಣ್ಣನ, ಕಿತ್ತೂರು ರಾಣಿ ಚನ್ನಮ್ನ ಭಾವಚಿತ್ರಗಳು ಅವರ ಹೋರಾಟದ ಕಥೆಗಳಿಗೆ ಕರೆದೊಯ್ಯುತ್ತವೆ.

ADVERTISEMENT

ನಿಲ್ದಾಣ ಮುಖ್ಯಕಟ್ಟಡದ ಬದಿಯಲ್ಲಿ ಮಹಾತ್ಮ ಗಾಂಧಿ ಮತ್ತು ದೊಡ್ಡಪ್ಪ ಅಪ್ಪ ಅವರ ಭೇಟಿಯ ವರ್ಣ ಚಿತ್ರದ ಫ್ಲೆಕ್ಸ್, ಅಂದಿನ ದಾಸೋಹ ಹಾಗೂ ಸ್ವಾತಂತ್ರ್ಯ ಹೋರಾಟದ ಚರ್ಚೆಯನ್ನು ತಿಳಿಸುತ್ತದೆ. ಇನ್ನೊಂದು ಬದಿಯಲ್ಲಿನ ಸಂವಿಧಾನ ಸಮರ್ಪಣೆ ಚಿತ್ರವೂ ಪ್ರಜಾಪ್ರಭುತ್ವದ ಆಶಯಗಳನ್ನು ಹೇಳುತ್ತದೆ.

ನಿಲ್ದಾಣದ ಗೋಡೆ ಹಾಗೂ ಕಂಬಗಳ ಮೇಲೆ ಸ್ವಾತಂತ್ರ್ಯ ಹಾಗೂ ಹೈದರಾಬಾದ್ ವಿಮೋಚನಾ ಹೋರಾಟಗಾರದ ಜಗನ್ನಾಥ ಚಂಡ್ರಕಿ, ಅಪ್ಪರಾವ ಪಾಟೀಲ, ಸ್ವಾಮಿ ರಮಾನಂದ ತೀರ್ಥ, ವಿದ್ಯಾಧರ ಗುರೂಜಿ, ಅಚ್ಚಪ್ಪಗೌಡ ಸುಬೇದಾರ, ಕೊಲೂರು ಮಲ್ಲಪ್ಪ, ಶಂಕರಶೆಟ್ಟಿ ಪಾಟೀಲ, ಸರದಾರ ಶರಣಗೌಡ ಇನಾಮದಾರ ಚಿತ್ರಗಳನ್ನು ಅಳವಡಿಸಲಾಗಿದೆ.

ನಿಲ್ದಾಣದಲ್ಲಿ ಒಂದು ವಾರ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ
ಅಂಗವಾಗಿ ಜನರಲ್ಲಿ ದೇಶಭಕ್ತಿ ಜಾಗೃತಿಗೊಳಿಸಲು ಮತ್ತು ದೇಶದ ಮೇಲಿನ ಪ್ರೀತಿ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ನಿಲ್ದಾಣದಲ್ಲಿ
ನಿತ್ಯ ನಡೆಸಲಾಗುವುದು’ ಎಂದು ಹೇಳಿದರು.

ಸಂಸ್ಥೆಯ ಸಿಬ್ಬಂದಿಗೆ ರಾಷ್ಟ್ರ ಧ್ವಜದ ಬ್ಯಾಡ್ಜ್, ಧ್ವಜಗಳು, ಟಿ-ಶರ್ಟ್ ವಿತರಿಸಲಾಯಿತು. ಸಿಬ್ಬಂದಿಗೆ ಒಂದು ವಾರ ರಂಗೋಲಿ, ಚಿತ್ರಕಲೆಗಳಂತಹ ಸ್ಪರ್ಧೆಗಳು ನಡೆಯಲಿವೆ.

ಕೆಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಜಾಗೃತ ಅಧಿಕಾರಿ ಆನಂದ‌ ಬಂದರಕಳ್ಳಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಕೆ.ಅಶ್ರಫ್, ಉಪ ಮುಖ್ಯ ಸಂಚಾರಿ ವ್ಯವಸ್ಥಾಪಕ ಎಂ. ಫೈಯಾಜ್, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸಿದ್ದಪ್ಪ ಗಂಗಾಧರ, ಸುನೀಲ ಚಂದರಗಿ ಇತರರು ಇದ್ದರು.

ಕೇಂದ್ರ ವಾರ್ತಾ ಮತ್ತು ಪ್ತಸಾರ ಸಚಿವಾಲಯದ ಪಿಐಬಿ ಸಂಸ್ಥೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.

*
ಸ್ವಾತಂತ್ರ್ಯ ಹೋರಾಟಗಾರರು ಕುರಿತು ಯುವಜನರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ. ಬಸ್‌ ನಿಲ್ದಾಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಅದನ್ನು ಸಾಕಾರಗೊಳಿಸಲಿದೆ.
-ಅಡ್ಡೂರು ಶ್ರೀನಿವಾಸಲು, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.