ADVERTISEMENT

ಸಂಸದ ಡಾ.ಜಾಧವ ಸಾಧನೆ ಶೂನ್ಯ: ಬಾಬುರಾವ ಚವ್ಹಾಣ

ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಾಬುರಾವ ಚವ್ಹಾಣ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 4:15 IST
Last Updated 11 ಜೂನ್ 2020, 4:15 IST

ಕಲಬುರ್ಗಿ: ‘ಜಿಲ್ಲೆಗೆ ರೈಲ್ವೆ ವಿಭಾಗವನ್ನು ಮಂಜೂರು ಮಾಡಿಸಿಕೊಂಡು ಬರಲು ವಿಫಲರಾದ ಸಂಸದ ಡಾ.ಉಮೇಶ ಜಾಧವ ಅವರು ಒಂದು ವರ್ಷದಲ್ಲಿ ಹೇಳಿಕೊಳ್ಳುವಂತಹ ಯಾವ ಯೋಜನೆಯನ್ನೂ ಕೇಂದ್ರದಿಂದ ತಂದಿಲ್ಲ. ಅವರು ಶೂನ್ಯ ಸಾಧನೆ ಮಾಡಿದ್ದಾರೆ’ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಾಬುರಾವ ಚವ್ಹಾಣ ಟೀಕಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದರು ಬರೀ ಕಾಗದದ ಹುಲಿಯಾಗಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 2134 ಜನರಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ ಒಂದು ಸಾವಿರ ಜನರು ಬಂಜಾರ ಸಮುದಾಯಕ್ಕೆ ಸೇರಿದವರು. ಅವೈಜ್ಞಾನಿಕವಾಗಿ ಶಾಲೆ, ವಸತಿ ನಿಲಯಗಳಲ್ಲಿ ಬೇರೆ ರಾಜ್ಯಗಳಿಂದ ವಾಪಸಾದವರನ್ನು ಕ್ವಾರಂಟೈನ್‌ ಮಾಡಲಾಯಿತು. ಒಬ್ಬೊಬ್ಬರನ್ನೂ ಪ್ರತ್ಯೇಕ ಕೋಣೆಯಲ್ಲಿರಿಸುವ ಬದಲು ನೂರಾರು ಜನರನ್ನು ಒಂದೆ ಕೋಣೆಯಲ್ಲಿ ಹಲವು ದಿನಗಳ ಕಾಲ ಇರಿಸಿದ್ದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಿದೆ. ಇದಕ್ಕೆ ಜಿಲ್ಲಾಡಳಿತವೇ ಹೊಣೆ. ಜೊತೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಸಂಸದರು ಅತಿ ಆಸಕ್ತಿ ವಹಿಸಿ ಜನರನ್ನು ಕರೆತಂದವರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಈ ವೈಫಲ್ಯದ ಹೊಣೆ ಹೊತ್ತು ಡಾ.ಉಮೇಶ ಜಾಧವ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಒಬ್ಬ ಕೋವಿಡ್‌ ರೋಗಿಗೆ ಸರ್ಕಾರ ₹ 3 ಲಕ್ಷ ಖರ್ಚು ಮಾಡಿ ಚಿಕಿತ್ಸೆ ನೀಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಆದರೆ, ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಸಂಪೂರ್ಣ ಜನರನ್ನು ನಡುನೀರಿನಲ್ಲಿ ಕೈಬಿಟ್ಟಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗೂ ಬಿಜೆಪಿ ಸರ್ಕಾರವೇ ಇದೆ. ಆದರೆ, ಕೊರೊನಾ ವೈರಾಣು ಹತೋಟಿಗೆ ಎರಡೂ ಸರ್ಕಾರ ವಿಫಲವಾಗಿವೆ’ ಎಂದು ಟೀಕಿಸಿದರು.

ADVERTISEMENT

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೆ ಸಂಸತ್ತಿಗೆ ತೆರಳುವುದನ್ನು ಸಹಿಸದ ಕೆಲ ಶಕ್ತಿಗಳು ಕರೆ ಮಾಡಿ ಜೀವ ಬೆದರಿಕೆ ಹಾಕಿವೆ.ಮಹಾರಾಷ್ಟ್ರದಿಂದ ಕರೆ ಬಂದಿರುವ ಸಾಧ್ಯತೆ ಇದ್ದು, ಇದರ ಹಿಂದೆ ಇರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.