ಕಲಬುರಗಿ: ‘ಪ್ರತಿಯೊಬ್ಬರ ಜೀವನದಲ್ಲಿ ಇತಿಹಾಸ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ನಾವು ಎಲ್ಲಿಂದ ಬಂದಿದ್ದೇವೆ ಎಂದು ಗೊತ್ತಿಲ್ಲ ಅಂದರೆ ಮುಂದೆ ಸಾಗಲು ಮತ್ತು ಗುರಿ ತಲುಪಲು ಸಾಧ್ಯವಿಲ್ಲ. ನಮ್ಮ ಕುಟುಂಬ, ಸಮುದಾಯ, ಊರಿನ ಇತಿಹಾಸವನ್ನು ತಿಳಿದುಕೊಂಡಿರಬೇಕು’ ಎಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಅನಿಲಕುಮಾರ ಜಿ.ಬಿಡವೆ ಹೇಳಿದರು.
ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ವಿಭಾಗೀಯ ಪತ್ರಾಗಾರ ಕಚೇರಿ ಕಲಬುರಗಿ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ‘ಬಹಮನಿ ಸಾಮ್ರಾಜ್ಯದ ಚರಿತ್ರೆ ಮತ್ತು ಸಂಸ್ಕೃತಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇತಿಹಾಸವನ್ನು ಯಾವುದೇ ಕಾರಣಕ್ಕೂ ತಿರುಚಲು ಹೋಗಬಾರದು. ನೈಜ ಇತಿಹಾಸ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇತಿಹಾಸ ಸಂಶೋಧಕರು, ಇತಿಹಾಸಕಾರರು ಮುಂದಿನ ಪೀಳಿಗೆಗೆ ನಮ್ಮ ಇತಿಹಾಸ ತಿಳಿಸಲು ಶ್ರಮಿಸುತ್ತಿದ್ದಾರೆ’ ಎಂದರು.
‘ನಮ್ಮಲ್ಲಿ ಹಿಂದೆ ನಳಂದಾ, ತಕ್ಷಶಿಲಾ ಸೇರಿದಂತೆ ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳಿದ್ದವು. ವಿದೇಶಿಯರು ಬಂದು ವಿದ್ಯಾಭ್ಯಾಸ ಮಾಡಿ ಹೋಗುತ್ತಿದ್ದರು. ಪ್ರಸ್ತುತ ನಮ್ಮ ದೇಶದಲ್ಲಿ 1,100ಕ್ಕೂ ಹೆಚ್ಚು ವಿಶ್ವವಿದ್ಯಾಲಯ, 45 ಸಾವಿರಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದರೂ ಜಗತ್ತಿನ ಟಾಪ್ 100ರಲ್ಲಿ ಸ್ಥಾನ ಪಡೆಯಲು ಆಗಿಲ್ಲ. ಹಾಗಾಗಿ, ಮತ್ತೆ ನಾವು ಅತ್ಯುನ್ನತ ಸ್ಥಾನಕ್ಕೇರಲು ಹೊಸ ಶಿಕ್ಷಣ ನೀತಿ ಅಗತ್ಯವಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸೊಸೈಟಿ ಕಾರ್ಯದರ್ಶಿ ಉದಯಕುಮಾರ ಎಸ್.ಚಿಂಚೋಳಿ ಮಾತನಾಡಿ, ‘ಪ್ರತಿಯೊಬ್ಬರೂ ಇತಿಹಾಸವನ್ನು ಮರೆಯಬಾರದು. ನಮ್ಮ ಇತಿಹಾಸವನ್ನು ಮೆಲುಕು ಹಾಕಲು ಮತ್ತು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಲು ಈ ವಿಚಾರ ಸಂಕಿರಣ ಸಹಕಾರಿಯಾಗಿದೆ’ ಎಂದು ಹೇಳಿದರು.
ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಮಾತನಾಡಿ, ‘ವಿಚಾರ ಸಂಕಿರಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, 200 ಜನ ನೋಂದಣಿ ಮಾಡಿ, ಪಾಲ್ಗೊಂಡಿದ್ದು ಖುಷಿಯ ಸಂಗತಿ’ ಎಂದರು.
ಇತಿಹಾಸ ತಜ್ಞ ಶಂಭುಲಿಂಗ ವಾಣಿ ಮಾತನಾಡಿ, ‘ಇತಿಹಾಸವನ್ನು ಇಣುಕಿ ನೋಡುವುದಕ್ಕಿಂತ ಕೆಣಕಿ ನೋಡಬೇಕು. ಅಂದಾಗಲೇ ನೈಜ ಇತಿಹಾಸ ಹೊರಬರಲು ಸಾಧ್ಯವಾಗುತ್ತದೆ. ಬಹಮನಿ ಸಾಮ್ರಾಜ್ಯದ ಇತಿಹಾಸ ಅದ್ಭುತವಾದದ್ದು. ಪ್ರತಿಯೊಬ್ಬರೂ ಸ್ಥಳೀಯ ಇತಿಹಾಸ ತಿಳಿದುಕೊಳ್ಳಬೇಕು’ ಎಂದರು.
ವಿಜಯಕುಮಾರ ಸಾಲಿಮನಿ, ಪದ್ಮಜಾ ದೇಸಾಯಿ ಅನಿಸಿಕೆ ವ್ಯಕ್ತಪಡಿಸಿದರು.
ಎಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ನಾಗಣ್ಣ ಎಸ್.ಘಂಟಿ, ಶರಣಬಸವ ವಿ.ವಿ ನಿರ್ದೇಶಕ ತ್ರಯಂಬಕ ಬಿರಾದಾರ, ನಿವೃತ್ತ ಪ್ರಾಚಾರ್ಯ ಅಶೋಕ ಜೀವಣಗಿ, ಕಾಲೇಜಿನ ಪ್ರಾಂಶುಪಾಲ ಆರ್.ಬಿ.ಕೊಂಡಾ, ಇತಿಹಾಸ ವಿಭಾಗದ ಮುಖ್ಯಸ್ಥ ಸುಭಾಷ್‌ಚಂದ್ರ ದೊಡ್ಡಮನಿ, ಸಂಶೋಧಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜ್ಯೋತಿಪ್ರಕಾಶ ದೇಶಮುಖ, ಕವಿತಾ ಎ.ಎಂ. ನಿರೂಪಿಸಿದರು.
ವಿಚಾರ ಸಂಕಿರಣಕ್ಕೆ ಮಹಾರಾಷ್ಟ್ರ ಆಂಧ್ರಪ್ರದೇಶ ದೆಹಲಿಯಿಂದ 68 ಲೇಖನಗಳು ಬಂದಿವೆ. ಎರಡು ದಿನಗಳ 5 ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ಬಹಮನಿ ಸಾಮ್ರಾಜ್ಯದ ಚರಿತ್ರೆ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿದ್ದಾರೆ.– ಆರ್.ಬಿ.ಕೊಂಡಾ, ಪ್ರಾಂಶುಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.