ವಾಡಿ: ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರೇ ವಾಸಿಸುವ ವಾಡಿ ಪಟ್ಟಣದ ಬಸವನಖಣಿ ನಿವಾಸಿಗಳಿಗೆ ಹಕ್ಕುಪತ್ರ ಗಗನಕುಸುಮ ಎನ್ನುವಂತಾಗಿದೆ.
ವಾರ್ಡ್ ನಂ.1ರ ಬಸವನಖಣಿಯಲ್ಲಿ ಸುಮಾರು 400ಕ್ಕೂ ಅಧಿಕ ಮನೆಗಳಿದ್ದು 1,088 ಜನಸಂಖ್ಯೆ ಹೊಂದಿದೆ. ಆದರೆ 60ಕ್ಕೂ ಅಧಿಕ ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಮಾಡುತ್ತಿರುವುದು ಮಾತ್ರ ವಿಪರ್ಯಾಸ.
ನಿತ್ಯ ಬೆಳಗ್ಗೆ ಎದ್ದು ಕೂಲಿ ಕೆಲಸಕ್ಕೆ ತೆರಳುವ ಇಲ್ಲಿನ ಜನರು ಪುರಕಲ್ಲು ಮನೆ ಕಟ್ಟಿಕೊಂಡು ಅನಾಥಪ್ರಜ್ಞೆ ನಡುವೆ ಕಾಲ ಕಳೆಯುತ್ತಿದ್ದಾರೆ. ಬಡಾವಣೆಯಲ್ಲಿ ಸುತ್ತಾಡಿದಾಗ ಕಾಣಿಸುವುದು ಮುರುಕಲು ಮನೆಗಳು, ಮನೆ ಮುಂದೆಯೇ ಹರಿಯುತ್ತಿರುವ ಕೊಳಚೆ ನೀರು, ಬಯಲಲ್ಲೇ ಶೌಚ ಮಾಡಬೇಕಾದ ದುಸ್ಥಿತಿ.
ಇಲ್ಲಿನ ಯಾವುದೇ ಮನೆಗಳಿಗೂ ಹಕ್ಕುಪತ್ರ ನೀಡಿಲ್ಲ, ಪಹಣಿಯಲ್ಲಿ ಸರ್ಕಾರಿ ಜಮೀನು ಎಂದು ನಮೂದಾಗಿದೆ. ಮನೆಯ ಹಕ್ಕುಪತ್ರ ಇಲ್ಲದ ಕಾರಣ ಸರ್ಕಾರಿ ಸೌಲಭ್ಯ, ಸಾಲ ಸೌಲಭ್ಯ ವಂಚಿತರಾಗಿದ್ದಾರೆ.
‘ಜಿಲ್ಲಾಡಳಿತ ಮನಸ್ಸು ಮಾಡಿದರೆ ನಮ್ಮ ಕಷ್ಟ ಬಗೆಹರಿಸುವುದು ದೊಡ್ಡ ಸವಾಲಿನ ಸಂಗತಿಯೇನಲ್ಲ. ಮನವಿ ಮಾಡಿದ್ದರೂ ಕಾಲಹರಣ ಮಾಡಲಾಗುತ್ತಿದೆ. ನನ್ನ ತಾತ ಇಲ್ಲೇ ಓಡಾಡಿದವರು, ನನ್ನ ಅಪ್ಪನ ಕಾಲ ಮುಗಿಯಿತು, ನನಗೂ ವಯಸ್ಸಾಯಿತು, ನನ್ನ ಮುಂದಿನ ತಲೆಮಾರಿಗೆ ಇಂತಹ ಶಿಕ್ಷೆ ಬೇಡ’ ಎಂದು ರಮೇಶ ರಾಠೋಡ ಮತ್ತು ರಾಮು ಬೋವಿ ಅಳಲು ತೋಡಿಕೊಂಡರು.
‘ಅನಧಿಕೃತ ಮನೆಗಳನ್ನು ಸಕ್ರಮಗೊಳಿಸಲು ಕಳೆದ ಹತ್ತು ವರ್ಷಗಳ ಹಿಂದೆಯೇ ಚಲನ್ ತುಂಬಿ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದೇವೆ, ಆದರೆ ಹಕ್ಕುಪತ್ರ ಮಾತ್ರ ದೊರೆಯಲಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಇಲಾಖೆ, ತಹಶೀಲ್ದಾರ್ ಅವರಿಗೆ ಮನವಿ ಕೊಟ್ಟಿದ್ದೇವೆ. ಹಕ್ಕುಪತ್ರ ಭಾಗ್ಯ ಮಾತ್ರ ಸಿಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರು.
‘ಹಕ್ಕುಪತ್ರಕ್ಕಾಗಿ ಹಲವು ದಶಕದ ಬೇಡಿಕೆ ಇದ್ದು ಆಡಳಿತ ಸ್ಪಂದಿಸುತ್ತಿಲ್ಲ. ನಿರ್ಲಕ್ಷ ಮುಂದುವರೆದರೆ ಮುಂದಿನ ಒಂದು ವಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಕರವೇ ನಾರಾಯಣಗೌಡ ಬಣ ಅಧ್ಯಕ್ಷ ಗಣೇಶ ರಾಠೋಡ ಎಚ್ಚರಿಸಿದ್ದಾರೆ.
ಹಕ್ಕುಪತ್ರಕ್ಕಾಗಿ ಸ್ಥಳೀಯರು 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನಗರಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ರಿಜೆಕ್ಟ್ ಮಾಡಲಾಗಿತ್ತು. ಕೊಳಚೆ ಅಭಿವೃದ್ಧಿ ಮಂಡಳಿಗೆ ಜಮೀನು ಹಸ್ತಾಂತರಿಸಲಾದ್ದು ಇಲಾಖೆಯಿಂದ ಸ್ಲಂ ಬೋರ್ಡ್ ಎಂದು ಘೋಷಿಸಲಾಗಿದೆ. ಹಕ್ಕುಪತ್ರಕ್ಕಾಗಿ ಮನೆಗಳನ್ನು ಗುರುತಿಸಲಾಗಿದೆ. ಶೀಘ್ರವೇ ಹಕ್ಕು ಪತ್ರ ವಿತರಿಸುವ ಕಾರ್ಯ ನಡೆಯಲಿದೆ.ನಾಗಯ್ಯ ಹಿರೇಮಠ ತಹಶೀಲ್ದಾರ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.