ADVERTISEMENT

ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿ 20ರಿಂದ

ಪದವಿ ಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ಟೂರ್ನಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 7:05 IST
Last Updated 18 ಅಕ್ಟೋಬರ್ 2024, 7:05 IST

ಕಲಬುರಗಿ: ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿ ಅಕ್ಟೋಬರ್ 20, 21, 22ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿಗಳಿಸುವ ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿವೆ.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಾಲಕ–ಬಾಲಕಿಯರ ಒಟ್ಟು 60 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಇದರಲ್ಲಿ 800 ಬಾಲಕ–ಬಾಲಕಿಯರು ಹಾಗೂ ರೆಫರಿಗಳು, ತಂಡಗಳ ವ್ಯವಸ್ಥಾಪಕರು 200 ಸೇರಿದಂತೆ ಟೂರ್ನಿಯಲ್ಲಿ ಒಟ್ಟು 1000 ಜನರು
ಪಾಲ್ಗೊಳ್ಳಲಿದ್ದಾರೆ. 

ಅ.20ರಂದು ತಂಡಗಳ ನೋಂದಣಿ ಕಾರ್ಯ ಹಾಗೂ ಸಂಜೆ ಸರಳವಾಗಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. 21ರಂದು ಲೀಗ್ ಪಂದ್ಯಗಳು, 22ರಂದು ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ನಡೆಯಲಿವೆ. ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನೂ ವಿತರಿಸಲಾಗುತ್ತದೆ. 

ADVERTISEMENT

ಬಾಲಕರ ಪಂದ್ಯಗಳು ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಹಾಗೂ ಬಾಲಕಿಯರ ಪಂದ್ಯಗಳು ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಬ್ಯಾಸ್ಕೆಟ್‌ಬಾಲ್‌ ಅಂಗಣದಲ್ಲಿ ನಡೆಯಲಿವೆ.

‘ರಾಜ್ಯಮಟ್ಟದ ಟೂರ್ನಿಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಾಲಕ–ಬಾಲಕಿಯರಿಗೆ ವಸತಿ, ಊಟ, ಉಪಹಾರಕ್ಕಾಗಿ ಅಚ್ಚುಕಟ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಹಲವು ಸಮಿತಿಗಳನ್ನು ಮಾಡಿದ್ದೇವೆ. ವಸತಿ, ಆಹಾರ, ಸಾರಿಗೆ, ಫಲಿತಾಂಶ, ವೈದ್ಯಕೀಯ ಸಮಿತಿಗಳನ್ನು ರಚಿಸಲಾಗಿದೆ. ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಮಾಹಿತಿ
ನೀಡಿದರು.

ಸಮಿತಿಗಳಲ್ಲಿ ಪ್ರಾಂಶುಪಾಲರು ಸೇರಿದಂತೆ ಹಿರಿಯ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬಾಲಕಿಯರಿಗಾಗಿ ಈಗಾಗಲೇ ನಾಲ್ಕು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು. ಅಲ್ಲದೇ ಟೂರ್ನಿಯಲ್ಲಿ ಫಲಿತಾಂಶ ನೀಡಲು ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಿದ ರೆಫರಿಗಳಿದ್ದು, ಯಾವುದೇ ತಂಡಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅಲ್ಲದೇ ಪೊಲೀಸ್‌ ಬಂದೋಬಸ್ತ್‌ ಮಾಡಲಾಗುವುದು’ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಕಷ್ಟು ಬ್ಯಾಸ್ಕೆಟ್‌ಬಾಲ್‌ ಪ್ರತಿಭೆಗಳಿವೆ. ಇಂತಹ ಟೂರ್ನಿಗಳ ಆಯೋಜನೆಯಿಂದ ಸೂಕ್ತ ವೇದಿಕೆ ದೊರೆಯುತ್ತದೆ. ಜತೆಗೆ ಜಿಲ್ಲೆಯಲ್ಲಿ ಕ್ರೀಡೆಯ ಅಭಿವೃದ್ಧಿಗೊಳ್ಳುತ್ತದೆ. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದವರೆಗಿನ ಟೂರ್ನಿಗಳು ಆಯೋಜನೆಯಾಗಲಿ ಎಂದು ಬ್ಯಾಸ್ಕೆಟ್‌ಬಾಲ್‌ ತರಬೇತುದಾರ ಪ್ರವೀಣ ಪುಣೆ
ಹೇಳಿದರು.

ಕಲಬುರಗಿ ನಗರದ ಚಂದ್ರಶೇಖರ ಕ್ರೀಡಾಂಗಣದಲ್ಲಿರುವ ಬ್ಯಾಸ್ಕೆಟ್‌ಬಾಲ್‌ ಅಂಗಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.