ADVERTISEMENT

ಬಿ.ಇಡಿ ಪರೀಕ್ಷೆ ನಡೆದು ಒಂದೂವರೆ ತಿಂಗಳಾದರೂ ಫಲಿತಾಂಶ ಪ್ರಕಟಿಸದ ಗುವಿವಿ

ಮನೋಜ ಕುಮಾರ್ ಗುದ್ದಿ
Published 15 ಜನವರಿ 2023, 11:17 IST
Last Updated 15 ಜನವರಿ 2023, 11:17 IST
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ ವಿಶ್ವವಿದ್ಯಾಲಯ   

ಕಲಬುರಗಿ: ಕಳೆದ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪದವಿ ಪರೀಕ್ಷೆ ನಡೆಸಿದೆ. ಆದರೆ, ಇನ್ನೂ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸದ ಕಾರಣ ಬಿ.ಇಡಿ ಪದವಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿ ಎದುರಾಗಿದೆ.

ಈಗಾಗಲೇ ಬಿ.ಇಡಿ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳು ಸೀಟು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ವಿಶ್ವವಿದ್ಯಾಲಯವು ಬಿ.ಎಸ್ಸಿ, ಬಿಬಿಎಂ ಫಲಿತಾಂಶ ಮಾತ್ರ ಪ್ರಕಟಿಸಿದ್ದು, ಬಿ.ಎ 6ನೇ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶ ಇನ್ನೂ ಪ್ರಕಟಿಸಿಲ್ಲ. ಇದರಿಂದ ಬಿ.ಇಡಿ ಸೀಟು ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೊಂದು ವರ್ಷ ಕಾಯಬೇಕಾದ ಪರಿಸ್ಥಿತಿಯಿದೆ. ಇಲ್ಲವೇ, ಲಕ್ಷಾಂತರ ರೂಪಾಯಿ ಮ್ಯಾನೇಜ್‌ಮೆಂಟ್ ಶುಲ್ಕ ಪಾವತಿಸಿ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಿದೆ. ಫಲಿತಾಂಶ ವಿಳಂಬದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.

ADVERTISEMENT

‘ಬಿ.ಇಡಿ ಸೀಟು ಪಡೆಯಲು ವಿವಿಧ ಕಾಲೇಜುಗಳಲ್ಲಿ ಜನವರಿ 11ಕ್ಕೆ ಆಪ್ಷನ್ ಎಂಟ್ರಿ ಮಾಡಲು ಅವಕಾಶವಿದೆ. 18ಕ್ಕೆ ಎಲ್ಲ ಪ್ರಕ್ರಿಯೆ ಮುಕ್ತಾಯವಾಗಲಿದೆ. ಅಷ್ಟರಲ್ಲಿ ಅಂತಿಮ ವರ್ಷದ ಅಂಕಪಟ್ಟಿಯ ಆನ್‌ಲೈನ್ ಪ್ರತಿಯನ್ನಾದರೂ ಕೊಡಿ ಎಂದು ಬಿ.ಇಡಿ. ಕಾಲೇಜುಗಳ ಮುಖ್ಯಸ್ಥರು ಕೇಳುತ್ತಿದ್ದಾರೆ. ಆದರೆ, ನಮ್ಮ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ’ ಎಂದು ಬಿ.ಇಡಿ ಪದವಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚನ್ನಬಸವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಲಿತಾಂಶ ಬಗ್ಗೆ ಕೇಳಲು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸಂಪರ್ಕಿಸಿದರೆ, ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸೇರಿ ರಾಜ್ಯದ ಬಹುತೇಕ ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಫಲಿತಾಂಶಗಳು ಹೊರಬಿದ್ದಿವೆ. ಗುಲಬುರ್ಗಾ ವಿಶ್ವವಿದ್ಯಾಲಯದ ಫಲಿತಾಂಶ ಪ್ರಕಟವಾಗುವವರೆಗೆ ಬಿ.ಇಡಿ. ಆಯ್ಕೆ ಪ್ರಕ್ರಿಯೆ ಮುಂದೂಡಬೇಕು’ ಎಂದರು.

‘ಬಿ.ಇಡಿ ಆಯ್ಕೆ ಪ್ರಕ್ರಿಯೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗುವುದು. ಅದನ್ನು ಸಚಿವರು ಮಾನ್ಯ ಮಾಡಬಹುದು, ಬಿಡಬಹುದು ಎಂದು ವಿಶ್ವವಿದ್ಯಾಲಯದವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ವಿದ್ಯಾರ್ಥಿಗಳ ಜೀವನದೊಂದಿಗೆ ಆಟ ಆಡುವುದು ಯಾವ ನ್ಯಾಯ’ ಎಂದು ದೂರಿದರು.

‘ಪದವಿ ಫಲಿತಾಂಶ ಪ್ರಕಟಿಸಲು ಆದ್ಯತೆ’

‘ಬಿ.ಇಡಿ ಪದವಿ ಹಾಗೂ ಇತರ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಆದಷ್ಟು ಶೀಘ್ರವೇ ಬಿ.ಎ, ಬಿ.ಕಾಂ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಗುಲಬರ್ಗಾ ವಿ.ವಿ. ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ ತಿಳಿಸಿದರು.

‘ಕಾರಣಾಂತರದಿಂದ ಪರೀಕ್ಷೆ ನಡೆಸುವುದು ತಡವಾಯಿತು. ಇದರಿಂದ ಫಲಿತಾಂಶ ವಿಳಂಬವಾಗಿದೆ. ಶನಿವಾರ ರಾತ್ರಿಯೇ ಬಿ.ಕಾಂ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ಬಿ.ಎ. ಪರೀಕ್ಷೆ ಫಲಿತಾಂಶವನ್ನು ಒಂದು ವಾರದೊಳಗೆ ಪ್ರಕಟಿಸಲಾಗುವುದು’ ಎಂದರು.

‘ಸರ್ಕಾರ ವಿದ್ಯಾರ್ಥಿಗಳ ನೆರವಿಗೆ ಬರಲಿ’

‘ಗುಲಬರ್ಗಾ ವಿಶ್ವವಿದ್ಯಾಲಯದ ಎನ್‌ಇಪಿ ಇಲ್ಲದ ಕೊನೆಯ ಬ್ಯಾಚ್‌ನ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಮುಗಿದು ಎರಡು ತಿಂಗಳಾದರೂ ಇನ್ನೂ ಫಲಿತಾಂಶ ಪ್ರಕಟವಾಗದಿರುವುದು ವಿಶ್ವವಿದ್ಯಾಲಯದ ಹೊಣೆಗೇಡಿತನಕ್ಕೆ ನಿದರ್ಶನ’ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಚ್‌.ಎಸ್ ಆರೋಪಿಸಿದರು.

‘ಬಿ.ಇಡಿ ಕೌನ್ಸೆಲಿಂಗ್‌ ಜನವರಿ 18ರಂದು ನಡೆಯಲಿದೆ. ಅಷ್ಟರಲ್ಲಿ ಫಲಿತಾಂಶ ಪ್ರಕಟವಾಗದಿದ್ದರೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಸಾವಿರಾರು ಪದವಿ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ. ಕೌನ್ಸೆಲಿಂಗ್ ದಿನಾಂಕ ವಿಸ್ತರಿಸುವಂತೆ ವಿಶ್ವವಿದ್ಯಾಲಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಸರ್ಕಾರವೂ ಈ ಮನವಿಯನ್ನು ಪುರಸ್ಕರಿಸಿ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.