ADVERTISEMENT

4ರಂದು ಭೂಮಾಪಕರ ಬೆಂಗಳೂರು ಚಲೊ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 15:23 IST
Last Updated 23 ಆಗಸ್ಟ್ 2019, 15:23 IST
ವೀರಣ್ಣ ಗಣಜಲಖೇಡ
ವೀರಣ್ಣ ಗಣಜಲಖೇಡ   

ಕಲಬುರ್ಗಿ: ಭೂಮಾಪಕರಿಗೆ ತಿಂಗಳಿಗೆ 30 ಕಡತಗಳ ಬದಲು ಈ ಮೊದಲಿನಂತೆ 18ಕಡತಗಳನ್ನೇ ನಿಗದಿಪಡಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 4ರಂದು ಬೆಂಗಳೂರು ಚಲೊ ಹಮ್ಮಿಕೊಳ್ಳಲಾಗಿದೆ ಎಂದು ಜೇವರ್ಗಿ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ವೀರಣ್ಣ ಎನ್. ಗಣಜಲಖೇಡ್ ಧುತ್ತರಗಾಂವ ತಿಳಿಸಿದ್ದಾರೆ.

ತಿಂಗಳಿಗೆ ಹೊಲ ಸರ್ವೇ ಮಾಡುವ 18 ಕಡತಗಳ ಬದಲಾಗಿ ಒಮ್ಮೆಲೇ 30ಕ್ಕೆ ಹೆಚ್ಚಳ ಮಾಡಿರುವುದು ಭೂಮಾಪಕರಿಗೆ ಹೆಚ್ಚಿನ ಹೊರೆ ಆಗುವುದರ ಜತೆಗೆ ಮಾನಸಿಕ ಹಿಂಸೆಗೆ ಕಾರಣವಾಗುತ್ತಿದೆ. ಈ ಹೊರಯನ್ನು ಕಡಿಮೆಗೊಳಿಸುವಂತೆ ಆಗ್ರಹಿಸಿ ರಾಜ್ಯದಾದ್ಯಂತಭೂಮಾಪಕರೆಲ್ಲರೂ ಒಗ್ಗೂಡಿ ಚಳುವಳಿ ರೂಪಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲು ಪ್ರತಿ ಭೂಮಾಪಕನಿಗೆ ಒಬ್ಬ ಜವಾನರು ನೋಟಿಸ್ ಜಾರಿ ಮಾಡಲು ಇರುತ್ತಿದ್ದರು. ಈಗ ಯಾರೂ ಇರುವುದಿಲ್ಲ. ನೋಟಿಸ್‌ ನೀಡಲು ಸ್ಟಾಂಪ್ ನೀಡುತ್ತಿದ್ದರು. ಈಗ ನೀಡುತ್ತಿಲ್ಲ. ಹೀಗಾಗಿ ಭೂಮಾಪಕರೇ ಹಳ್ಳಿಗೆ ಹೋಗಿ ನೋಟಿಸ್‌ ನೀಡುವ ಪರಿಸ್ಥಿತಿ ಇದೆ. ಇಲಾಖೆಯಲ್ಲಿ ತಂತ್ರಾಂಶದ ಮುಖಾಂತರ ಕೆಲಸ ನಿರ್ವಹಿಸಲಾಗುತ್ತಿದೆ. ಪ್ರತಿ ಭೂಮಾಪಕನಿಗೆ ಸರ್ಕಾರದ ವತಿಯಿಂದ ಲ್ಯಾಪ್‌ಟ್ಯಾಪ್ ನೀಡಬೇಕು. ಬರೀ ಅಂಕಿ ಅಂಶಗಳಲ್ಲಿ ಪ್ರಗತಿಯಾಗದೇ ಗುಣಮಟ್ಟದಲ್ಲಿ ಕೆಲಸವಾಗಬೇಕು. ಹೀಗಾಗಿ ಈ ಮೊದಲಿನಂತೆ 18 ಕಡತಗಳು ನಿಗದಿ ಮಾಡಿದಲ್ಲಿ ಭೂಮಾಪಕರಿಗೆ ಸಮರ್ಪಕವಾಗಿ ಹಾಗೂಸುಗಮವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಈ ಎಲ್ಲ ಬೇಡಿಕೆಗಳಿಗೆಆಗ್ರಹಿಸಿ ಬೆಂಗಳೂರು ಚಲೊ ಹಮ್ಮಿಕೊಳ್ಳಲಾಗಿದೆ ಎಂದು ವೀರಣ್ಣ ಗಣಜಲಖೇಡ್ಧುತ್ತರಗಾಂವ್ ಹಾಗೂ ಭೂಮಾಪಕ ಸಂತೋಷ ಬೆಟ್ಟದ ತಿಳಿಸಿದ್ದಾರೆ.

ADVERTISEMENT

ಬೆಂಗಳೂರು ಚಲೊ ಪ್ರತಿಭಟನೆಗೆ ಇಲಾಖೆ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಮತ್ತೆ ಮುಂದಿನ ಹಂತದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.