ADVERTISEMENT

ಆಳಂದ | ತುಂಬಿದ ಬೆಣ್ಣೆತೊರಾ ಹಳ್ಳ; ಸಂಚಾರ ಸ್ಥಗಿತ

ಮಾಡಿಯಾಳ, ಭೂಸನೂರು ಗ್ರಾಮಕ್ಕೆ ಜಿಪಂ ಸಿಇಒ ಭಂವರ್‌ ಸಿಂಗ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:05 IST
Last Updated 22 ಸೆಪ್ಟೆಂಬರ್ 2025, 5:05 IST
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಸಂತ್ರಸ್ಥ ಕುಟುಂಬಗಳ ಮನೆಗೆ ಭೇಟಿ ನೀಡಿ ಜಿಪಂ ಸಿಇಒ ಭಂವರ್‌ ಸಿಂಗ್‌ ಮೀನಾ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ, ಸಂಗಮೇಶ ಇದ್ದರು.
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಸಂತ್ರಸ್ಥ ಕುಟುಂಬಗಳ ಮನೆಗೆ ಭೇಟಿ ನೀಡಿ ಜಿಪಂ ಸಿಇಒ ಭಂವರ್‌ ಸಿಂಗ್‌ ಮೀನಾ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ, ಸಂಗಮೇಶ ಇದ್ದರು.   

ಆಳಂದ: ತಾಲ್ಲೂಕಿನ ಕಮಲಾನಗರ- ಬೋಧನ ಗ್ರಾಮದ ಮಧ್ಯದಲ್ಲಿನ ಬೆಣ್ಣೆತೊರಾ ಹಳ್ಳದ ಸೇತುವೆಯು ತುಂಬಿ ಹರಿಯುತ್ತಿದ್ದು, ಇದರಿಂದ ಶನಿವಾರ ಮಧ್ಯಾಹ್ನದಿಂದ ಕಲಬುರಗಿ-ಬಸವ ಕಲ್ಯಾಣ ರಾಜ್ಯ ಹೆದ್ದಾರಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಮಹಾಲಯ ಅಮಾವಾಸ್ಯೆ ನಿಮಿತ್ತ ಸುತ್ತಲಿನ ಗ್ರಾಮದ ಜನರು ವಿವಿಧ ದೇವಸ್ಥಾನಗಳ ದರ್ಶನಕ್ಕೆ ತೆರಳಿದ್ದರು. ಆದರೆ ತೆರಳಿದ್ದ ಭಕ್ತರು ಮನೆಗಳಿಗೆ ವಾಪಸ್‌ ಆಗಲು ಅಡ್ಡಿಯಾಯಿತು. ರಾತ್ರಿಯಾದರೂ ನೀರಿನ ಪ್ರಮಾಣ ಕಡಿಮೆಯಾಗದ ಕಾರಣ ಪ್ರಯಾಣಿಕರು ಎರಡು ಬದಿಯಲ್ಲಿನ ಕಮಲಾನಗರದ ಹನುಮಾನ ದೇವಸ್ಥಾನ ಹಾಗೂ ಬೋಧನ ಗ್ರಾಮದ ದೇವಿ ಮಂದಿರದಲ್ಲಿ ಆಶ್ರಯ ಪಡೆದುಕೊಂಡರು.

ಧಾರಾಕಾರ ಮಳೆಯಿಂದ ವಿ.ಕೆ.ಸಲಗರ, ಬೆಳಮಗಿ, ನರೋಣಾ, ಚಿಂಚನಸೂರು, ವಾಗ್ದರಗಿ, ಕರಹರಿ ಗ್ರಾಮಗಳಿಗೆ ಸಂಚಾರ ಸ್ಥಗಿತಗೊಂಡಿತು. ಹೀಗಾಗಿ ಜನರು ಪರದಾಡಿದರು. ಬೆಣ್ಣೆತೊರಾ ತಟದಲ್ಲಿನ ಕಮಲಾನಗರ, ಬೋಧನ, ಅಂಬಲಗಾ, ಹೊಡಲ್‌, ವಾಗ್ದರಿಗಿ, ಲಿಂಗನವಾಡಿ, ಬೆಟ್ಟಜೇವರ್ಗಿ ಮತ್ತಿತರ ಗ್ರಾಮದ ಹೊಲಗದ್ದೆಗಳು ಜಲಾವೃತ್ತವಾಗಿವೆ.

ಮಾಡಿಯಾಳ ಕೆರೆಗೆ ಸಿಇಒ ಭೇಟಿ: ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಅಧಿಕ ಮಳೆಗೆ ಒಡ್ಡು ಒಡೆದ ಕೆರೆಗೆ ಜಿಪಂ ಸಿಇಒ ಭಂವರ್‌ ಸಿಂಗ್‌ ಮೀನಾ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ಹಳೆಯ ಕೆರೆ ಸಮರ್ಪಕ ನಿರ್ವಹಣೆ ಕೈಗೊಳ್ಳದ ಕಾರಣ ಕೆರೆ ಒಡ್ಡು ಒಡೆದು ಹಾನಿಯಾಗಿದೆ. ಮಳೆ ನಿಂತ ಮೇಲೆ ದುರಸ್ತಿ ಕಾರ್ಯ ಕೈಗೊಳ್ಳಲು ಎಇಇ ಸಂಗಮೇಶ ಅವರಿಗೆ ತಿಳಿಸಿದರು.

ಜೋಳ, ತೊಗರಿ, ಉದ್ದು ಹಾಗೂ ಧವಸ ಧಾನ್ಯಗಳು ನೀರಿಗೆ ಹಾಳಾಗಿರುವದನ್ನು ಪರಿಶೀಲಿಸಿದ ಸಿಇಒ ಭಂವರ್‌ ಸಿಂಗ್‌ ಅವರು, ತಕ್ಷಣ ಕಂದಾಯ ಇಲಾಖೆಯಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ರಾಷ್ಟ್ರೀಯ ವಿಪತ್ತು ನಿಧಿಯಿಂದ ಅಗತ್ಯ ಪರಿಹಾರ ಸಂತ್ರಸ್ತ ಕುಟುಂಬಗಳಿಗೆ ವಿತರಣೆ ಮಾಡುವ ಭರವಸೆ ನೀಡಿದರು.

ಗ್ರಾಮದಲ್ಲಿ ನೀರು ನುಗ್ಗಿದ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ, ತಕ್ಷಣ ಮೋಟಾರ್‌ ಪಂಪ್‌ ಮೂಲಕ ನೀರು ತೆಗೆಸಲು ಸೂಚಿಸಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ, ನೀರಾವರಿ ಇಲಾಖೆ ಎಇಇ ಸಂಗಮೇಶ ಬಿರಾದಾರ, ಗ್ರಾಪಂ ಅಧ್ಯಕ್ಷ ಸುಭಾಷ ಪಾಟೀಲ, ಪಿಡಿಒ ಪ್ರಭಾಕರ ಮಡ್ಡಿತೋಟ, ಶ್ರೀಕಾಂತ ಕೌಲಗಿ, ರಮೇಶ ರಾಠೋಡ, ಸೈಪಾನ್‌ ಸಾಬ, ರಮೇಶ ಕಲಶೆಟ್ಟಿ, ಬಾಬು ತೆಲ್ಲೂರು ಉಪಸ್ಥಿತರಿದ್ದರು.

ನಂತರ ಅಮರ್ಜಾ ಅಣೆಕಟ್ಟೆಯ ಕೆಳಭಾಗದ ಭೂಸನೂರು ಗ್ರಾಮಕ್ಕೂ ಸಿಇಒ ಭೇಟಿ ನೀಡಿ, ಮನೆಗಳಿಗೆ ನೀರು ನುಗ್ಗಿದ ಕುಟುಂಸ್ಥರಿಗೆ ಸೂಕ್ತ ಪರಿಹಾರ ಕ್ರಮದ ಭರವಸೆ ನೀಡಿದರು.

ಕೆರೆ ತಟದ ಗ್ರಾಮಗಳಿಗೆ ಎಚ್ಚೆರಿಕೆ: ನೆರೆಯ ಮಹಾರಾಷ್ಟ್ರದ ಕೆಸರಜವಳಗಾ, ಆಲೂರು ಹಾಗೂ ಸಾಲೇಗಾಂವ , ಮಟಕಿ ಕೆರೆಗಳಲ್ಲಿ ಅಪಾರ ಪ್ರಮಾಣದ ನೀರು ಭರ್ತಿಯಾಗಿದೆ. ಹೀಗಾಗಿ ಕೆರೆಯ ಕೆಳಭಾಗದ ಗ್ರಾಮಸ್ಥರಿಗೆ ಡಂಗೂರದ ಮೂಲಕ ಹಳ್ಳ ದಾಟಲು ಹೋಗದಂತೆ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಕಟ್ಟಲು ಮೂನ್ಸೂಚನೆ ನೀಡಲಾಗಿದೆ.

ಭಾನುವಾರ ಮಧ್ಯಾಹ್ನದಿಂದ ವಿವಿಧ ಗ್ರಾಮಗಳಲ್ಲಿ ಮಳೆ ಸುರಿಯಿತು. ಇದರಿಂದ ಮತ್ತೆ ಅಮರ್ಜಾ ತಟದಲ್ಲಿನ ಬಹುತೇಕ ಹಳ್ಳಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಹೀಗಾಗಿ ತಾಲ್ಲೂಕಿನ ಹೆಬಳಿ, ಚಿಂಚೋಳಿ, ಖಾನಾಪುರ, ಪಡಸಾವಳಿ, ತೀರ್ಥ, ಮಟಕಿ, ಜೀರಹಳ್ಳಿ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಕೆರೆ ಒಡ್ಡು ಒಡೆದ ಸ್ಥಳಕ್ಕೆ ಜಿಪಂ ಸಿಇಒ ಭಂವರ್‌ ಸಿಂಗ್‌ ಮೀನಾ ಭೇಟಿ ನೀಡಿ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ ಸಂಗಮೇಶ ಬಿರಾದಾರ ಇದ್ದರು.
ಆಳಂದ ತಾಲ್ಲೂಕಿನ ಕಮಲಾನಗರ-ಬೋಧನ ಗ್ರಾಮದ ಮಧ್ಯದ ಬೆಣ್ಣೆತೊರಾ ಸೇತುವೆಯು ಜಲಾವೃತ್ತಗೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕೊಳವೆಬಾವಿಯಿಂದ ಅಂತರ್ಜಲ ಜಿನುಗುತ್ತಿದೆ
ಆಳಂದ ತಾಲ್ಲೂಕಿನ ಮೋಘಾ ಕೆ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿ ಕಿರು ಸೇತುವೆ ಸತತ ಮಳೆಗೆ ಕುಸಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಫಲಕ ಹಾಕುತ್ತಿರುವ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.