ಜೇವರ್ಗಿ: ಭೀಮಾನದಿ ಪ್ರವಾಹಕ್ಕೆ ತುತ್ತಾಗಿರುವ ಜೇವರ್ಗಿ ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳಲ್ಲಿ ವಿಷ ಜಂತುಗಳ ಕಾಟ ಆರಂಭಗೊಂಡಿದ್ದು, ಸಂತ್ರಸ್ತರ ನಿದ್ದೆಗೆಡೆಸಿದೆ.
ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯದಿಂದ ಭೀಮಾ ನದಿಗೆ ಹೆಚ್ಚಿನ ನೀರು ಬಿಟ್ಟ ಪರಿಣಾಮ ನದಿ ತೀರದ ಜನರ ಬದುಕು ಬರ್ಬಾದ್ ಆಗಿದೆ. ಉತ್ತಮ ಬೆಳೆ, ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಭೀಮಾ ಪ್ರವಾಹ ತಣ್ಣೀರು ಎರಚಿದೆ. ಅಷ್ಟೇ ಅಲ್ಲದೇ ಇದೀಗ ವಿಷ ಜಂತುಗಳಿಂದ ಜನರು ಇನ್ನಷ್ಟು ಭಯಪಡುವಂತಾಗಿದೆ.
ಕೋನಾಹಿಪ್ಪರಗಿ, ಮಂದರವಾಡ, ಕೋಬಾಳ, ಕೂಡಿ, ಮಾಹೂರ ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ಜನರನ್ನು ಖಾಲಿ ಮಾಡಿಸಿ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ, ಅರ್ಧದಷ್ಟು ಮುಳುಗಡೆಯಾದ ಇನ್ನೂ ಕೆಲ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿರುವುದರಿಂದ ದುರ್ವಾಸನೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಮತ್ತು ವಿಷ ಜಂತುಗಳ ಭಯ ಕಾಡುತ್ತಿದೆ.
ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಾದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಗ್ರಾಮದ ಸುತ್ತಲೂ ನೀರು ಬಂದಿರುವುದರಿಂದ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು ಮುಳುಗಡೆಯಾಗಿವೆ. ಇದರಿಂದ ಭೀಮಾ ತೀರದ ಜನರು ರಾತ್ರಿಯಿಡೀ ಕತ್ತಲೆಯಲ್ಲಿ ವಿಷ ಜಂತುಗಳ ಹಾವಳಿಯಿಂದ ನಿದ್ರೆ ಇಲ್ಲದೇ ರಾತ್ರಿ ಕಳೆಯುತ್ತಿದ್ದಾರೆ.
ಈಗಾಗಲೇ ಭೀಮಾ ತೀರದ ಗ್ರಾಮಗಳ ಒಟ್ಟು 4,500 ಜನರನ್ನು ಕಾಳಜಿ ಕೇಂದ್ರದಲ್ಲಿ ಊಟೋಪಚಾರ ಹಾಗೂ ಸೌಲಭ್ಯ ಒದಗಿಸಿಕೊಡಲಾಗಿದೆ.
ಶುದ್ದ ಕುಡಿಯುವ ನೀರು ಕೊಡಿ: ಪ್ರವಾಹ ಪರಿಸ್ಥಿತಿ ಪರಿಶೀಲನೆ ಆಗಮಿಸಿದ ತಹಶೀಲ್ದಾರ್ ಅವರನ್ನು ತಡೆದ ತಾಲ್ಲೂಕಿನ ಕೋಬಾಳ ಮಂದರವಾಡ ಕೋನಾಹಿಪ್ಪರಗಾ ಗ್ರಾಮದ ಸಂತ್ರಸ್ತರು ಶುದ್ದ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಕಲುಷಿತ ನೀರು ಕುಡಿದು ಆರೋಗ್ಯ ಹದಗೆಟ್ಟು ಹೋಗಿದೆಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಹಶೀಲ್ದಾರ್ ಹಾಗೂ ತಾಪಂ ಇಒ ರವಿಚಂದ್ರರೆಡ್ಡಿ ಕೂಡಲ ಟ್ಯಾಂಕರ್ ನೀರು ಸರಬರಾಜು ಮಾಡಲು ಸಂಬಂಧಿಸಿದ ಗ್ರಾಪಂ ಪಿಡಿಒ ಅವರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.