ADVERTISEMENT

ಜೇವರ್ಗಿ ಅಪಘಾತ: ಮೃತರ ಸಂಖ್ಯೆ ನಾಲ್ಕಕ್ಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:20 IST
Last Updated 27 ನವೆಂಬರ್ 2025, 5:20 IST

ಕಲಬುರಗಿ: ಜಿಲ್ಲೆಯ ಜೇವರ್ಗಿ ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಮಂಗಳವಾರ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಈರಣ್ಣ ಶಿರಸಂಗಿ ಬುಧವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.

ಅವಘಡದಲ್ಲಿ ಗಾಯಗೊಂಡಿದ್ದ ಕಾರು ಚಾಲಕ ಆಂಥೋನಿಯಾ ರಾಜ್ ಆರೋಗ್ಯ ಸ್ಥಿರವಾಗಿದೆ. ಐಎಎಸ್‌ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ಮೂವರು ಮಂಗಳವಾರ ಮೃತಪಟ್ಟಿದ್ದರು.

‘ಈರಣ್ಣ ಶಿರಸಂಗಿ ಅವರ ಸ್ಥಿತಿ ಗಂಭೀರವಾಗಿತ್ತು. ಎದೆಯ ಎರಡೂ ಕಡೆ ಎಲುಬುಗಳು ಮುರಿದಿದ್ದವು. ಬಿಪಿ ಕುಸಿಯುತ್ತಿತ್ತು. ಅದಾಗ್ಯೂ, ಎರಡು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನೂ ಮಾಡಲಾಗಿತ್ತು. ಆದರೂ, ಅವರು ಬದುಕುಳಿಯಲಿಲ್ಲ. ಚಾಲಕ ರಾಜ್‌ ಆರೋಗ್ಯ ಸ್ಥಿರವಾಗಿದೆ’ ಎಂದು ಮನೂರ್‌ ಸೂಪರ್ ಸ್ಪೆಷ್ಟಾಲಿಟಿ ಆಸ್‍ತ್ರೆಯ ನಿರ್ದೇಶಕ ಡಾ.ಫಾರೂಕ್‌ ಮನೂರ್‌ ತಿಳಿಸಿದ್ದಾರೆ.

ADVERTISEMENT

ಸ್ಥಳ ಮಹಜರು:

ಕಾರು ಅಪಘಾತ ನಡೆದ ಸ್ಥಳಕ್ಕೆ ಎಸ್ಪಿ ನೇತೃತ್ವದಲ್ಲಿ ಆರ್‌ಎಫ್‌ಎಸ್‌ಎಲ್‌ ತಂಡ, ಸೀನ್‌ ಆಫ್ ಕ್ರೈಂ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು. ಎರಡೂ ತಂಡಗಳು ಅವಘಡ ವಿಶ್ಲೇಷಣೆ ನಡೆಸಿ, ಮಾಹಿತಿ, ಸಾಕ್ಷ್ಯಗಳನ್ನು ಸಂಗ್ರಹಿಸಿದವು.

‘ಎಫ್‌ಎಸ್‌ಎಲ್‌ ವರದಿ ಕೈ ಸೇರಿದ ಬಳಿಕ ಅಪಘಾತ ಹೇಗಾಯಿತು? ವಾಹನ ಯಾವ ವೇಗದಲ್ಲಿತ್ತು? ಅಪಘಾತಕ್ಕೆ ನಿಖರ ಕಾರಣ ಪತ್ತೆಯಾಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಚಾಲಕನ ವಿರುದ್ಧ ಎಫ್‌ಐಆರ್ (ಜೇವರ್ಗಿ ವರದಿ):

ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ನಾಲ್ವರ ಸಾವಿಗೆ ಕಾರಣವಾದ ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಆಂಥೋನಿಯಾ ರಾಜ್‌ ವಿರುದ್ಧ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಬೀಳಗಿ ಅವರ ಸಂಬಂಧಿಕ ಬಸವರಾಜ ಕಮರಟಗಿ ನೀಡಿದ ದೂರಿನನ್ವಯ ಚಾಲಕನ ವಿರುದ್ಧ ಬಿಎನ್‌ಎಸ್‌ನ 281, 125(A), 125(B), 106 ಕಾಯ್ದೆಯಡಿ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.