ADVERTISEMENT

‘ಬಿಜೆಪಿ ಮೀಸಲಾತಿಯ ವಿರೋಧಿ’

ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಿದ್ದರಾಮಯ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 6:34 IST
Last Updated 13 ಅಕ್ಟೋಬರ್ 2021, 6:34 IST
ಕಲಬುರಗಿಯ ಜಗತ್ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಜನಸ್ತೋಮ
ಕಲಬುರಗಿಯ ಜಗತ್ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಜನಸ್ತೋಮ   

ಕಲಬುರಗಿ: ಬಿಜೆಪಿಯು ಮೊದಲಿನಿಂದಲೂ ಮೀಸಲಾತಿಯ ವಿರೋಧಿಯಾಗಿದೆ. ಮಂಡಲ್‌ ವರದಿಯನ್ನೂ ಅನುಷ್ಠಾನಕ್ಕೆ ತರಲು ಅಡ್ಡಿಪಡಿಸಿದ್ದ ಬಿಜೆಪಿ ಇಂದು ಹಿಂದುಳಿದ ವರ್ಗದವರಿಗೆ ನೆರವಾಗಲಿರುವ ಸಾಮಾಜಿಕ, ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿಯನ್ನು ಒಪ್ಪಿಕೊಳ್ಳಲು ಕುಂಟು ನೆಪ ಹೇಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟವು ಎಚ್. ಕಾಂತರಾಜು ನೇತೃತ್ವದಲ್ಲಿ ತಯಾರಿಸಲಾದ ಸಾಮಾಜಿಕ, ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬ್ರಾಹ್ಮಣ, ಕ್ಷತ್ರಿಯ ವೈಶ್ಯ, ಶೂದ್ರ ಎಂದು ಜನಗಳನ್ನು ಜಾತಿಗಳ ಆಧಾರದ ಮೇಲೆ ಶ್ರೇಣೀಕರಿಸಲಾಗಿತ್ತು. ಆ ಶ್ರೇಣೀಕರಣ ಗೌತಮ ಬುದ್ಧ ಕಾಲವಾದ ಎರಡೂವರೆ ವರ್ಷಗಳ ಬಳಿಕ, ಬಸವಣ್ಣ ಕಾಲವಾದ 850 ವರ್ಷಗಳ ಬಳಿಕ ಇಂದಿಗೂ ಅಸ್ತಿತ್ವದಲ್ಲಿದೆ. ಇದನ್ನು ವ್ಯವಸ್ಥೆಯನ್ನು ಕಿತ್ತು ಹಾಕುವ ನಿಟ್ಟಿನಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು 1950ರ ಜನವರಿ 26ರಂದು ಒಪ್ಪಿಕೊಳ್ಳಲಾಯಿತು. ಸಂವಿಧಾನದ ಮೊದಲ ತಿದ್ದುಪಡಿಯೇ ಹಿಂದುಳಿದವರಿಗೆ ಶೈಕ್ಷಣಿಕ, ಸಾಮಾಜಿಕ ಮೀಸಲಾತಿಗೆ ಸಂಬಂಧಿಸಿದ್ದಾಗಿತ್ತು. ಅಂದಿನಿಂದಲೂ ಹಿಂದುಳಿದ ಸಮುದಾಯದವರಿಗೆ ಮೀಸಲಾತಿ ನೀಡುವ ಬಗ್ಗೆ ಪ್ರಯತ್ನಗಳು ನಡೆದಿವೆ. ಆದರೆ, ಬಿಜೆಪಿ ಈ ಪ್ರಯತ್ನಗಳಿಗೆ ತಡೆ ಒಡ್ಡುತ್ತಲೇ ಇದೆ’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಶೇ 26.4ರಷ್ಟು ಹಿಂದುಳಿದ ಸಮುದಾಯದವರು ಹಾಗೂ ಶೇ 50ರಷ್ಟು ಮಹಿಳೆಯರು ಸ್ಪರ್ಧಿಸುವ ನಿರ್ಣಯವನ್ನು ಕೈಗೊಂಡು ಆದೇಶ ಹೊರಡಿಸಿದ್ದೆವು. ಈ ಆದೇಶವನ್ನು ಪ್ರಶ್ನಿಸಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯಿಸ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದೃಷ್ಟವಶಾತ್ ನ್ಯಾಯಾಲಯವು ಅವರ ಅರ್ಜಿಯನ್ನು ತಳ್ಳಿ ಹಾಕಿತು. ಈಗಲೂ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಕಡಿಮೆ ಸೀಟುಗಳು ಹಂಚಿಕೆಯಾದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ’ ಎಂದು ಹೇಳಿದರು.‌

‘ಹಿಂದುಳಿದ ವರ್ಗದವರು ನೌಕರಿ ಪಡೆಯುವುದಕ್ಕೂ ಮುನ್ನ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಮೊದಲು ಜಿಲ್ಲಾಧಿಕಾರಿ ಅವರು ಜಾತಿ ಪ್ರಮಾಣಪತ್ರವನ್ನು ನೀಡುತ್ತಿದ್ದರು. ಆದರೆ, ಕೆ.ಎಸ್‌. ಈಶ್ವರಪ್ಪ ಸಚಿವರಾಗಿರುವ ಬಿಜೆಪಿ ಸರ್ಕಾರ ಆ ನೀತಿಯನ್ನು ಬದಲಾಯಿಸಿ ಜಾತಿ ಪ್ರಮಾಣಪತ್ರವನ್ನು ಮೊದಲು ಸಿಆರ್‌ಇ ಘಟಕಕ್ಕೆ ಕಳುಹಿಸಬೇಕು. ಅದರ ಪರಿಶೀಲನೆಗೆ ಒಳಪಡಿಸಿದ ನಂತರವೇ ಜಿಲ್ಲಾಧಿಕಾರಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೊಸ ಆದೇಶ ಹೊರಡಿಸಿತು. ಸಿಆರ್‌ಇ ಘಟಕಕ್ಕೆ ಕಳುಹಿಸುವುದರ ಮೂಲಕ ಬಿಜೆಪಿ ಸರ್ಕಾರ ಹಿಂದುಳಿದವರಿಗೆ ಕಿರುಕುಳ ನೀಡಲು ಆರಂಭಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಶಾಸಕರಾದ ಎಂ.ವೈ. ಪಾಟೀಲ, ಡಾ. ಅಜಯ್ ಸಿಂಗ್, ಕನೀಜ್ ಫಾತಿಮಾ, ಕಾಂಗ್ರೆಸ್ ಮುಖಂಡರಾದ ಬಿ.ಆರ್. ಪಾಟೀಲ. ಎಚ್‌.ಎಂ. ರೇವಣ್ಣ, ವಿ.ಆರ್.ಸುದರ್ಶನ್, ಲಕ್ಷ್ಮಿನಾರಾಯಣ, ವಿಧಾನಪರಿಷತ್ ಮಾಜಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಕೌಲಗಿ, ಸೈಬಣ್ಣ ಜಮಾದಾರ ಇದ್ದರು. ಜಿಲ್ಲೆಯ ಚಿತ್ತಾಪುರ, ಜೇವರ್ಗಿ, ಆಳಂದ, ಅಫಜಲಪುರ, ಕಮಲಾ‍ಪುರ ಸೇರಿದಂತೆ ಬೀದರ್ ಹಾಗೂ ಯಾದಗಿರಿ ಜಿಲ್ಲೆಯಿಂದ ಸಹಸ್ರಾರು ಹಿಂದುಳಿದ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.