ADVERTISEMENT

ಪಕ್ಷೇತರ ಸದಸ್ಯ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ಬಿಜೆಪಿ ಸೇರ್ಪಡೆ

ಕಲಬುರ್ಗಿ ಪಾಲಿಕೆ ಚುಕ್ಕಾಣಿ ಹಿಡಿಯಲು ಬಿಜೆಪಿ ಕಸರತ್ತು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 3:07 IST
Last Updated 24 ಸೆಪ್ಟೆಂಬರ್ 2021, 3:07 IST
ಕಲಬುರ್ಗಿ ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ಅವರಿಗೆ ಸಿಹಿ ತಿನ್ನಿಸುವ ಮೂಲಕ ನಿರ್ಮಲ್‌ಕುಮಾರ್‌ ಸುರಾನಾ ಅವರು ಬಿಜೆಪಿಗೆ ಬರಮಾಡಿಕೊಂಡರು. ಶಿವರಾಜ ಪಾಟೀಲ ರದ್ದೇವಾಡಿ, ಸಿದ್ದಾಜಿ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಅಶ್ವತ್‌ ನಾರಾಯಣ, ರಾಜಕುಮಾರ ಪಾಟೀಲ ಇದ್ದರು 
ಕಲಬುರ್ಗಿ ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ಅವರಿಗೆ ಸಿಹಿ ತಿನ್ನಿಸುವ ಮೂಲಕ ನಿರ್ಮಲ್‌ಕುಮಾರ್‌ ಸುರಾನಾ ಅವರು ಬಿಜೆಪಿಗೆ ಬರಮಾಡಿಕೊಂಡರು. ಶಿವರಾಜ ಪಾಟೀಲ ರದ್ದೇವಾಡಿ, ಸಿದ್ದಾಜಿ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಅಶ್ವತ್‌ ನಾರಾಯಣ, ರಾಜಕುಮಾರ ಪಾಟೀಲ ಇದ್ದರು    

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಬಿಜೆಪಿ, ಪಕ್ಷೇತರ ಸದಸ್ಯ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಾರ್ಡ್‌ ನಂ.36ರಿಂದ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಅವರ ಸೇರ್ಪಡೆಯಿಂದ ಪಾಲಿಕೆಯಲ್ಲಿ ಬಿಜೆಪಿ ಸದಸ್ಯ ಬಲ 24ಕ್ಕೇರಿದೆ. ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಶಂಭುಲಿಂಗ ಅವರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸೇಡಂ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ‘ಕಲಬುರ್ಗಿ ಪಾಲಿಕೆಯ ಮೇಯರ್‌ ಸ್ಥಾನ ಬಿಜೆಪಿಗೆ ಲಭಿಸುವುದು ಖಚಿತ’ ಎಂದರು.

ADVERTISEMENT

‘ಪಾಲಿಕೆ ಹಲವು ವರ್ಷಗಳಿಂದ ಕಾಂಗ್ರೆಸ್ ಆಡಳಿತದಲ್ಲಿತ್ತು. ಸೌಕರ್ಯಗಳ ಕೊರತೆಯಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದರು. ಪಾಲಿಕೆಯ ಆಡಳಿತವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದ್ದು, ಜನರಿಗೆ ಮೂಲಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು’ ಎಂದು ಹೇಳಿದರು.

‌ಜೆಡಿಎಸ್‌ಮುಖಂಡರ ಜೊತೆ ಸ್ಥಳೀಯ ಶಾಸಕರು ಮಾತುಕತೆ ನಡೆಸುತ್ತಿದ್ದು, ಅವರು ಸ್ಪಂದಿಸುವ ವಿಶ್ವಾಸವಿದೆ ಎಂದು ನಿರ್ಮಲ್‌ಕುಮಾರ್‌ ಸುರಾನಾ ಹೇಳಿದರು.

ಶಾಸಕ ಬಸವರಾಜ ಮತ್ತಿಮೂಡ, ಬಿಜೆಪಿ ಕಲಬುರ್ಗಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಎಸ್. ಪಾಟೀಲ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ಮಹದೇವ ಬೆಳಮಗಿ ಇದ್ದರು.

‘ಬೇಷರತ್ತಾಗಿ ಪಕ್ಷ ಸೇರಿದ್ದೇನೆ’

‘ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದೆ. ಪಕ್ಷದ ತತ್ವ, ಸಿದ್ಧಾಂತಗಳಲ್ಲಿ ನನಗೆ ಅಪಾರ ನಂಬಿಕೆ ಇದೆ. ಹಾಗಾಗಿ, ಮರಳಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಕಲಬುರ್ಗಿ ಪಾಲಿಕೆಯ ಮೇಯರ್‌ ಅಧಿಕಾರವನ್ನು ಬಿಜೆಪಿಗೇ ಕೊಡಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಬೇರೇನೂ ಬೇಡಿಕೆ ಇಟ್ಟಿಲ್ಲ, ಷರತ್ತು ಹಾಕಿಲ್ಲ’ ಎಂದುಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ಪಕ್ಷದ ಮುಖಂಡರ ಮೇಲೆ ನನಗೆ ವಿಶ್ವಾಸವಿದೆ. ಈಗಿನ ನನ್ನ ನಿರ್ಧಾರವನ್ನು ನೆನಪಿಟ್ಟುಕೊಂಡು ಮುಂದೆ ಅವರೇ ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.