ADVERTISEMENT

‘ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿ ಕಲಬುರ್ಗಿ’; ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಸಚಿವ ನಿರಾಣಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 11:22 IST
Last Updated 28 ಆಗಸ್ಟ್ 2021, 11:22 IST
ಮಹಾನಗರ ಪಾಲಿಕೆಯ ಚುನಾವಣೆಯ ಬಿಜೆಪಿ ಪ್ರಣಾಳಿಕೆಯನ್ನು ಸಚಿವ ಮುರುಗೇಶ ನಿರಾಣಿ ಬಿಡುಗಡೆ ಮಾಡಿದರು. ಡಾ. ಅವಿನಾಶ್ ಜಾಧವ, ಬಿ.ಜಿ. ಪಾಟೀಲ, ಸಿದ್ದಾಜಿ ಪಾಟೀಲ, ಎನ್. ರವಿಕುಮಾರ್, ನಿರ್ಮಲಕುಮಾರ್ ಸುರಾನಾ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ ಇದ್ದರು
ಮಹಾನಗರ ಪಾಲಿಕೆಯ ಚುನಾವಣೆಯ ಬಿಜೆಪಿ ಪ್ರಣಾಳಿಕೆಯನ್ನು ಸಚಿವ ಮುರುಗೇಶ ನಿರಾಣಿ ಬಿಡುಗಡೆ ಮಾಡಿದರು. ಡಾ. ಅವಿನಾಶ್ ಜಾಧವ, ಬಿ.ಜಿ. ಪಾಟೀಲ, ಸಿದ್ದಾಜಿ ಪಾಟೀಲ, ಎನ್. ರವಿಕುಮಾರ್, ನಿರ್ಮಲಕುಮಾರ್ ಸುರಾನಾ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ ಇದ್ದರು   

ಕಲಬುರ್ಗಿ: ಕಲಬುರ್ಗಿ ಮಹಾನಗರವನ್ನು ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಮೂಲಕ ನಗರದ ಅಭಿವೃದ್ಧಿಗೆ ₹ 1 ಸಾವಿರ ಕೋಟಿ ಅನುದಾನ ಒದಗಿಸಲಾಗುವುದು ಎಂಬುದು ಸೇರಿದಂತೆ ಹಲವು ಭರವಸೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.

ಮಹಾನಗರ ಪಾಲಿಕೆ ಚುನಾವಣೆ ಪ್ರಯುಕ್ತ ನಗರದ ಲುಂಬಿಣಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ಶನಿವಾರ ಪ್ರಣಾಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಬಿಡುಗಡೆ ಮಾಡಿದರು.

‘ಕರ್ನಾಟಕದ ಮೈಸೂರು, ಹುಬ್ಬಳ್ಳಿ–ಧಾರವಾಡ, ದಾವಣಗೆರೆ, ಬೆಳಗಾವಿ, ಮಂಗಳೂರು ಹಾಗೂ ತುಮಕೂರು ನಗರಗಳಲ್ಲಿ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರವು ಎರಡನೇ ಹಂತದ ಸ್ಮಾರ್ಟ್ ಸಿಟಿ ಯೋಜನೆಯನ್ನು ಪ್ರಕಟಿಸಲಿದ್ದು, ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಲಬುರ್ಗಿಯನ್ನು ಪಟ್ಟಿಗೆ ಸೇರಿಸುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಲಾಗುವುದು’ ಎಂದರು.

ADVERTISEMENT

‘ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆಪ್ರತಿ ಮನೆಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗುವುದು. ಮಹಾತ್ಮ ಗಾಂಧಿ ನಗರೋತ್ಥಾನ (ನಗರ ವಿಕಾಸ) ಯೋಜನೆಯಡಿ ₹ 500 ಕೋಟಿಯ ವಿಶೇಷ ಪ್ಯಾಕೇಜ್‌ ಅನುದಾನದ ಮೂಲಕ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು. ನೂತನ ಬಡಾವಣೆಗಳಿಗೆ ಉತ್ತಮ ಗುಣಮಟ್ಟದ ರಸ್ತೆ, ಚರಂಡಿ, ಒಳಚರಂಡಿ ನಿರ್ಮಾಣ ಹಾಗೂ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಪ್ರತಿಯೊಂದು ಕಾಮಗಾರಿಯ ವಿವರವನ್ನು ವೆಬ್‌ಸೈಟ್‌ನಲ್ಲಿ ‍ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ನಗರದಲ್ಲಿರುವ ಪಾರ್ಕ್‌ಗಳನ್ನು ಹಸಿರು ತಾಣವಾಗಿಸುವ ನಿಟ್ಟಿನಲ್ಲಿ 50 ಸಾವಿರ ಸಸಿಗಳನ್ನು ನೆಡಲಾಗುವುದು. ಎಲ್ಲ ಉದ್ಯಾನಗಳಲ್ಲಿ ಓಪನ್ ಜಿಮ್ ಅಳವಡಿಸಲಾಗುವುದು. ಪಾಲಿಕೆಯ ಕೆಲಸಗಳಿಗಾಗಿ ಅಲೆದಾಡುವುದನ್ನು ತಪ್ಪಿಸಲು ಪಾಲಿಕೆ ಆ್ಯಪ್ ಅಭಿವೃದ್ಧಿಪಡಿಸಲಾಗುವುದು. ಗೃಹ ನಿರ್ಮಾಣ ನಕ್ಷೆಯ ಅನುಮೋದನೆಗಾಗಿ ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗುವುದು. ಪಾಲಿಕೆಯ ಎಲ್ಲಾ ಜನತೆಗೆ ಆರೋಗ್ಯ ಸೌಲಭ್ಯ ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಸಾಂಕ್ರಾಮಿಕ ರೋಗ ನಿರೋಧಕ್ಕೆ ವಿಶೇಷ ಘಟಕ ಸ್ಥಾಪಿಸಲಾಗುವುದು. ಅವಶ್ಯಕತೆ ಇರುವಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸಲಾಗುವುದು. ಸ್ಕಿಲ್ ಇಂಡಿಯಾ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡಗಳ ಮತ್ತು ಇತರ ಯುವಕರಿಗೆ ಸೂಕ್ತ ತರಬೇತಿ ನೀಡಲಾಗುವುದು. ಪೌರಕಾರ್ಮಿಕರಿಗೆ ನಿಯಮಿತವಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು’ ಎಂದು ನಿರಾಣಿ ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ, ಶಾಸಕ ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ, ಪಕ್ಷದ ಮಹಾನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ, ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಮಹಾದೇವ ಬೆಳಮಗಿ ಇದ್ದರು.

ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡದ ಸಚಿವ

ಕಲಬುರ್ಗಿಗೆ ಮಂಜೂರಾದ ಯೋಜನೆಗಳು ರದ್ದಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಚಿವ ನಿರಾಣಿ ಸ್ಪಷ್ಟ ಉತ್ತರ ನೀಡದೇ ಜಾರಿಕೊಂಡರು.

ಕಲಬುರ್ಗಿಗೆ ಮಂಜೂರಾಗಿದ್ದ ರೈಲ್ವೆ ವಿಭಾಗೀಯ ಕಚೇರಿ, ಜವಳಿ ಪಾರ್ಕ್ ಸೇರಿದಂತೆ ಎಂಟು ಪ್ರಮುಖ ಯೋಜನೆಗಳು ರದ್ದಾಗಿವೆ ಅಥವಾ ಬೇರೆ ಕಡೆ ಸ್ಥಳಾಂತರಗೊಂಡಿವೆ. ದೂರದರ್ಶನ ಕೇಂದ್ರವನ್ನೂ ಮುಚ್ಚುವ ಯತ್ನ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹ 1500 ಕೋಟಿ ವಾರ್ಷಿಕ ಅನುದಾನ ಘೋಷಣೆಯಾಗಿದ್ದರೂ ಒಮ್ಮೆಯೂ ಅಷ್ಟು ಅನುದಾನ ನೀಡಿಲ್ಲ. ಒಂದಾದರೂ ಕೇಂದ್ರದ ಯೋಜನೆಗಳನ್ನು ಕಲಬುರ್ಗಿಗೆ ತಂದಿದ್ದೀರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ. ಬದಲಾಗಿ, ದೂರದರ್ಶನ ಕೇಂದ್ರ ಮುಚ್ಚಲು ಬಿಡುವುದಿಲ್ಲ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದಷ್ಟೇ ಹೇಳಿದರು. ಜವಳಿ ಪಾರ್ಕ್, ರೈಲ್ವೆ ವಿಭಾಗೀಯ ಕಚೇರಿ ಆರಂಭದ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

ಸಂಸದ ಗೈರು

ಮಹಾನಗರ ಪಾಲಿಕೆ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಬಿಡುಗಡೆಯ ಸಂದರ್ಭದಲ್ಲಿ ಸಂಸದ ಡಾ.ಉಮೇಶ ಜಾಧವ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.