ಕಲಬುರಗಿ: ಆರ್‌ಸಿಬಿಯು ಐಪಿಎಲ್ ಟ್ರೋಫಿ ಗೆದ್ದಿದ್ದ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಜನ ಸಾವಿಗೀಡಾದ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಿದೆ. ಹೀಗಾಗಿ, ಪೊಲೀಸ್ ಅಧಿಕಾರಿಗಳ ಅಮಾನತು ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದ ಸರ್ದಾರ್ ಪಟೇಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಶಾಸಕ ಬಸವರಾಜ ಮತ್ತಿಮಡು, ‘ರಾಜ್ಯ ಸರ್ಕಾರದ ಹೊಣೆಗೇಡಿತನದ ನಿರ್ಧಾರದಿಂದಾಗಿ 11 ಅಮೂಲ್ಯ ಜೀವಗಳು ಕಾಲ್ತುಳಿತಕ್ಕೆ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರವು ತರಾತುರಿಯಲ್ಲಿ ಅಹ್ಮದಾಬಾದ್‌ನಲ್ಲಿದ್ದ ಆರ್‌ಸಿಬಿ ತಂಡದ ಆಟಗಾರರನ್ನು ಬೆಂಗಳೂರಿಗೆ ಕರೆಸಿಕೊಂಡು ವಿಜಯೋತ್ಸವ ಆಚರಿಸಲು ತೀರ್ಮಾನಿಸಿತ್ತು. ಪೊಲೀಸರ ಎಚ್ಚರಿಕೆಯ ಮಧ್ಯೆಯೂ ವಿಜಯೋತ್ಸವ ಮಾಡಿದ್ದು ಸರಿಯಲ್ಲ. ಸಾಲದೆಂಬಂತೆ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಕಮಿಷನರ್ ಬಿ. ದಯಾನಂದ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಸರಿಯಲ್ಲ. ಕೂಡಲೇ ಅಮಾನತು ಆದೇಶ ವಾಪಸ್ ಪಡೆಯುವುದರ ಜೊತೆಗೆ, ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ. ಪರಮೇಶ್ವರ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
ಮಹಾನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ‘ಸಾಮಾನ್ಯವಾಗಿ ವಿಜಯೋತ್ಸವದಂತಹ ಬೃಹತ್ ಕಾರ್ಯಕ್ರಮ ಆಯೋಜಿಸಲು ಎರಡು, ಮೂರು ದಿನ ಸಮಯ ಬೇಕಾಗುತ್ತದೆ. ಐಪಿಎಲ್ ಫೈನಲ್ ಮ್ಯಾಚ್ ನಡೆದ ರಾತ್ರಿಯೂ ವಿಜಯೋತ್ಸವ ನಡೆದಿತ್ತು. ಮತ್ತೆ ಮರುದಿನವೇ ಸರ್ಕಾರದಿಂದ ವಿಜಯೋತ್ಸವ ನಡೆಸಿದ್ದು ಅಕ್ಷಮ್ಯ ನಿರ್ಧಾರ. ಸೂಕ್ತ ಸಿದ್ಧತೆ ಮಾಡಿಕೊಳ್ಳದೇ ಎರಡು ಮೂರು ಕಡೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಕಾಲ್ತುಳಿದ ಸಂಭವಿಸಿದೆ. ಹೀಗಾಗಿ ಇದರ ಸಂಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಬಂಧಪಟ್ಟ ಸಚಿವರ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಬೇಕು’ ಎಂದರು.
ಬಿಜೆಪಿ ಒಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವಾನಂದ ಪಿಸ್ತಿ, ಸಚಿನ್ ಹೊನ್ನಾ, ಮುಖಂಡರಾದ ಬಿ. ರೇಣುಕಾಚಾರ್ಯ, ಮಹಾದೇವ ಬೆಳಮಗಿ, ಶಿವಯೋಗಿ ನಾಗನಳ್ಳಿ, ಶ್ರೀನಿವಾಸ ದೇಸಾಯಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.