ADVERTISEMENT

ಬಿಜೆಪಿಯವರು ತಮ್ಮ ಮಕ್ಕಳನ್ನು ಬೀದಿಗಿಳಿಸಿ ಪ್ರತಿಭಟಿಸಲಿ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 12:25 IST
Last Updated 10 ಸೆಪ್ಟೆಂಬರ್ 2025, 12:25 IST
   

ಕಲಬುರಗಿ: ‘ಬಿಜೆಪಿ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಆರ್‌ಎಸ್‌ಎಸ್ ಮೆಚ್ಚಿಸಲು ಧರ್ಮಸ್ಥಳ ‌ಚಲೋ, ಮದ್ದೂರು ‌ಚಲೋ‌ ನಡೆಸುತ್ತಿದ್ದಾರೆ’ ಎಂದು ಸಚಿವ‌ ಪ್ರಿಯಾಂಕ್ ಖರ್ಗೆ ಟೀಕಿಸಿದರು.

‘ಬಿಜೆಪಿ ನಿಯೋಗದಿಂದ ಮದ್ದೂರು ಚಲೋ ವಿಚಾರ’ವಾಗಿ ನಗರದಲ್ಲಿ ಪತ್ರಕರ್ತರ ಪ್ರಶ್ನೆಗೆ ಪತ್ರಿಕ್ರಿಯಿಸಿದ ಅವರು, ‘ಬಿಜೆಪಿ ನಾಯಕರು ಅಮಾಯಕರು, ಬಡವರನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳು, ಚಲೋಗಳನ್ನು ನಡೆಸುತ್ತಾರೆ. ಅದರ ಬದಲು ವಿದೇಶದಲ್ಲಿರುವ, ಉದ್ಯೋಗ ಮಾಡುತ್ತಿರುವ ತಮ್ಮ‌ ಮಕ್ಕಳನ್ನು ಕರೆಯಿಸಿ, ಮದ್ದೂರು ಚಲೋ ನಡೆಸಲಿ’ ಎಂದು ಸವಾಲು ಹಾಕಿದರು.

‘ಬಿಜೆಪಿ ನಾಯಕರ ಮಕ್ಕಳು ಧರ್ಮಸ್ಥಳ ಚಲೋದಲ್ಲಿ ಯಾಕೆ ಪಾಲ್ಗೊಳ್ಳಲ್ಲ? ನಿಮ್ಮ ಮಕ್ಕಳು ಯಾಕೆ ಕೇಸರಿ ಶಾಲು ಹಾಕಿಕೊಂಡು ಮದ್ದೂರು ಚಲೋದಲ್ಲಿ ಪಾಲ್ಗೊಳ್ಳುತ್ತಿಲ್ಲ? ಬರೀ ಬಡವರ ಮಕ್ಕಳೇ ಆಗಬೇಕಾ? ನಿಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು, ಬ್ಯುಸಿನೆಸ್‌ ಮಾಡಬೇಕಾ? ಅವರನ್ನೆಲ್ಲ ಧರ್ಮ ರಕ್ಷಣೆ, ಗೋರಕ್ಷಣೆಗಾಗಿ ಯಾಕೆ ಆರ್‌ಎಸ್‌ಎಸ್ ಶಾಖೆಗಳಿಗೆ ಕಳುಹಿಸುತ್ತಿಲ್ಲ? ಬಡವರು, ದಲಿತರು, ಅಮಾಯಕರನ್ನು ಪ್ರಚೋದಿಸಿ ಪ್ರತಿಭಟನೆ ಬಳಸುವ ಬದಲು, ನಿಮ್ಮ ಮಕ್ಕಳನ್ನು ಪ್ರತಿಭಟನೆ ನಡೆಸಲು ಬೀದಿಗಿಳಿಸಿ ನೋಡೋಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿ ನಾಯಕರು ಕರಾವಳಿ ಪ್ರಯೋಗಾಲಯಗಳನ್ನು ಎಲ್ಲೆಡೆ ಸ್ಥಾಪಿಸುತ್ತಿದ್ದಾರೆ. ಬಿಜೆಪಿಯವರು ಧರ್ಮಸ್ಥಳ ಚಲೋ ನಡೆಸಿದ್ದು ಯಾರ ಪರವಾಗಿ? ಧರ್ಮಾಧಿಕಾರಿ ಪರವಾಗಿ ಅಲ್ಲವೇ? ಮತ್ತೆ ಈ ಹಿಂದೆ ಸೌಜನ್ಯಾ ಮನೆಗೆ ಭೇಟಿ ಕೊಟ್ಟಿದ್ದರಲ್ಲ, ಯಾರ ಪರವಾಗಿ? ಎರಡೂ ದೋಣಿಯಲ್ಲಿ ಕಾಲಿಟ್ಟು ಪಯಣಿಸುತ್ತಾರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿಯವರಿಗೆ ಮಾಡಲು ಕೆಲಸ‌‌ ಇಲ್ಲ.‌ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲಿನಲ್ಲಿ ಅನ್ಯಾಯವಾದರೂ ಪ್ರಶ್ನಿಸಲ್ಲ. ಮದ್ದೂರು ಘಟನೆಗೆ ಸಂಬಂಧಿಸಿದಂತೆ ನಡೆಸಿದ ಶಾಂತಿ ಸಭೆಯಲ್ಲೂ ಬಿಜೆಪಿ ನಾಯಕರು ಪಾಲ್ಗೊಳ್ಳುವುದಿಲ್ಲ. ಹಾಗಾದರೆ ನಿಮ್ಮ ಉದ್ದೇಶವೇನು?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.