
ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ವಿಜಯೋತ್ಸವ ಆರಿಸಿ ಪರಸ್ಪರ ಸಿಹಿ ತಿನ್ನಿಸಿದರು
–ಪ್ರಜಾವಾಣಿ ಚಿತ್ರ
ಕಲಬುರಗಿ: ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ನಗರದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸೇರಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ‘ನರೇಂದ್ರ ಮೋದಿ ನೀವು ಮುನ್ನುಗ್ಗಿ ನಾವು ನಿಮ್ಮೊಂದಿಗೆ ಇದ್ದೇವೆ’, ‘ದೇಶದ ನಾಯಕ ಹೇಗಿರಬೇಕು, ಪ್ರಧಾನಿ ನರೇಂದ್ರ ಮೋದಿಯಂತಿರಬೇಕು’ ಎಂದು ಘೋಷಣೆ ಮೊಳಗಿಸಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಮಾತನಾಡಿ, ‘ವೋಟ್ ಚೋರ್ ಗದ್ದಿ ಛೋಡ್’ ಎಂದು ರಾಹುಲ್ ಗಾಂಧಿ ಬಿಹಾರ್ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ನರೇಂದ್ರ ಮೋದಿ ಅವರನ್ನು ಅವಮಾನಿಸಲು ಯತ್ನಿಸಿದ್ದರು. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಿಹಾರ್ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದಲ್ಲೂ ಮತಗಳವು ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಬಿಹಾರ್ ಚುನಾವಣಾ ಫಲಿತಾಂಶ ಒಂದು ಎಚ್ಚರಿಕೆಯಾಗಿದೆ. ಮತಗಳವು ಆರೋಪ ಹೀಗೆಯೇ ಮುಂದುವರಿದರೆ, ರಾಜ್ಯದಲ್ಲೂ ಕಾಂಗ್ರೆಸ್ ಭವಿಷ್ಯ ಬಿಹಾರ್‌ನಂತೆಯೇ ಆಗಲಿದೆ’ ಎಂದು ಎಚ್ಚರಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿ, ‘ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮತಗಳವು ವಿವಾದ ಇಟ್ಟುಕೊಂಡು ಬಿಹಾರ್ ಸೇರಿದಂತೆ ದೇಶದ ತುಂಬೆಲ್ಲ ಓಡಾಡಿತ್ತು. ತಾವೇ ಕಳ್ಳರಿದ್ದು, ಬೇರೆಯವರ ಮೇಲೆ ಗೂಬೆ ಕೂರಿಸಲು ಹೊರಟಿದ್ದ ರಾಹುಲ್ ಸೇರಿದಂತೆ ಇಂಡಿಯಾ ಒಕ್ಕೂಟಕ್ಕೆ ಬಿಹಾರದ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಸಾಧನೆಗಳೇನು ಎಂದು ಕಾಂಗ್ರೆಸ್‌ನವರು ಕೇಳುತ್ತಿದ್ದರು. ಇದೀಗ ಸಾಧನೆಗಳ ಆಧಾರದಲ್ಲೇ ಎನ್‌ಡಿಎ ಮೈತ್ರಿಕೂಟ ಗೆದ್ದು ತೋರಿಸಿದೆ. ಎರಡ್ಮೂರು ಮತಗಳನ್ನು ಇಟ್ಟುಕೊಂಡಿದ್ದವರ ವಿರುದ್ಧ ಎಸ್.ಐ.ಆರ್ ನಡೆಸಿದ ಕ್ರಮವನ್ನೂ ಬಿಹಾರ್ ಚುನಾವಣಾ ಫಲಿತಾಂಶ ಎತ್ತಿಹಿಡಿದಿದೆ’ ಎಂದು ಪ್ರತಿಪಾದಿಸಿದರು.
ಸಂಭ್ರಮಾಚರಣೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಶಿವಯೋಗಿ ನಾಗೇನಹಳ್ಳಿ, ಮಹಾದೇವ ಬೆಳಮಗಿ, ಶಿವರಾಜ ಪಾಟೀಲ ರದ್ದೇವಾಡಗಿ, ಮಂಡಲ ಅಧ್ಯಕ್ಷ ವರದಾಶಂಕರ ಶೆಟ್ಟಿ, ಡಾ.ಸುಧಾ ಹಾಲಕೈ, ಭಾಗೀರಥಿ ಗುನ್ನಾಪುರ, ನೀಲಾ ರಾಠೋಡ, ಮುಖಂಡರಾದ ಪ್ರಹ್ಲಾದ್ ಪೂಜಾರಿ, ರವಿಚಂದ್ರ ಕಾಂತಿಕರ, ಸಂತೋಷ ಹಾದಿಮನಿ, ಧರ್ಮಣ್ಣ ಇಟಗಾ, ಪಾಲಿಕೆ ಸದಸ್ಯ ಸಚಿನ ಕಡಗಂಚಿ, ಗಿರಿರಾಜ ಯಳಮೇಲಿ, ಶಿವ ಅಷ್ಟಗಿ, ಬಾಬುರಾವ್ ಹಾಗರಗುಂಡಗಿ, ಬಸವರಾಜ ಮದ್ರಿಕಿ ಉಪಸ್ಥಿತರಿದ್ದರು.
ಮತಗಳವು ಆರೋಪವನ್ನು ನಿಲ್ಲಿಸದಿದ್ದರೆ ಕಾಂಗ್ರೆಸ್ ನಿರ್ನಾಮವಾಗಲಿದೆ. ಕಾಂಗ್ರೆಸ್ ಸರ್ವನಾಶಕ್ಕೆ ನಾವ್ಯಾರೂ ಬೇಕಿಲ್ಲ. ರಾಹುಲ್ ಗಾಂಧಿ ಹಾಗೂ ಅವರ ಪಕ್ಷದ ಮುಖಂಡರೇ ಸಾಕುಅಶೋಕ ಬಗಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.