ADVERTISEMENT

‘ಬ್ಲ್ಯಾಕ್‌ ಫಂಗಸ್‌ನಿಂದ ಸಾವು: ಇನ್ನೂ ದೃಢಪಟ್ಟಿಲ್ಲ’

​ಪ್ರಜಾವಾಣಿ ವಾರ್ತೆ
Published 16 ಮೇ 2021, 2:08 IST
Last Updated 16 ಮೇ 2021, 2:08 IST

ಕಲಬುರ್ಗಿ: ‘ಕೊರೊನಾ ಸೋಂಕಿನಿಂದ ಗುಣಮುಖವಾದ ಮೇಲೂ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ. ಆದರೆ, ಈ ಸಾವಿಗೆ ಬ್ಲ್ಯಾಕ್‌ ಫಂಗಸ್‌ ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಪ್ರತಿಕ್ರಿಯಿಸಿದರು.

ಇಲ್ಲಿನ ಅಶೋಕ ನಗರ ಠಾಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಮಲ್ಲಿಕಾರ್ಜುನ ಪಂಚಕಟ್ಟಿ (51) ಶನಿವಾರ ಮೃತಪಟ್ಟರು. ಇದು ಕಪ್ಪು ಶಿಲೀಂದ್ರ ಸೋಂಕಿನ ಲಕ್ಷಣ ಎಂದು ಆಸ್ಪತ್ರೆ ವೈದ್ಯರು ಶಂಕಿಸಿದ್ದರು.

ಇದಕ್ಕೂ ಮುನ್ನ ಗುರುವಾರ, ಕಲಬುರ್ಗಿಯ ಕರುಣೇಶ್ವರ ನಗರದ ನಿವಾಸಿ ಪ್ರೊ.ಬುದ್ಧೇಶ್ ಶಂಕರ ಸಿಂಗೆ (53) ಅವರು ಸೊಲ್ಲಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರು ಕೊರೊನಾದಿಂದ ಎರಡು ವಾರಗಳ ಹಿಂದೆಯೇ ಗುಣವಾಗಿದ್ದರು. ಆದರೆ, ಬಹುಅಂಗಾಂಗ ವೈಫಲ್ಯದ ಕಾರಣ ಮತ್ತೆ ಆಸ್ಪತ್ರೆ ಸೇರಿದ್ದರು. ಇವರ ಸಾವಿಗೂ ಬ್ಲ್ಯಾಕ್‌ ಫಂಗಸ್‌ ಕಾರಣವಾಗಿರಬಹುದು ಎಂದು ಚಿಕಿತ್ಸೆ ನೀಡಿದ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.‌

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‘ಬ್ಲ್ಯಾಕ್‌ ಫಂಗಸ್‌ನಿಂದ ಸೋಂಕಿತರು ಸತ್ತಿರುವುದು ಇದೂವರೆಗೆ ಮಾಹಿತಿ ಖಚಿತವಾಗಿಲ್ಲ. ಪೊಲೀಸ್‌ ಕಾನ್‌ಸ್ಟೆಬಲ್‌ ಅವರು ಜಿಮ್ಸ್‌ನಲ್ಲಿಯೇ ಮೃತಪಟ್ಟಿದ್ದಾರೆ. ಜಿಮ್ಸ್‌ ವೈದ್ಯರು ಕೂಡ ಕಪ್ಪು ಶಿಲೀಂದ್ರದ ಖಚಿತ ವರದಿ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆದಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೆಲವು ಬ್ಲ್ಯಾಕ್‌ ಫಂಗಸ್‌ ಸಾವು ಸಂಭವಿಸಿದ್ದು ನಿಜ. ನಮ್ಮಲ್ಲಿ ಇದಕ್ಕೆ ತಜ್ಞ ವೈದ್ಯರು ಕೂಡ ಇದ್ದಾರೆ. ಆತಂಕ ಪಡಬೇಕಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.