ADVERTISEMENT

‘ನಗರದಲ್ಲಿ ಭೀಮಾ–ಕೋರೇಗಾಂವ ಸ್ತಂಭ’

‘ಮರೆಯದ ಮಾಣಿಕ್ಯ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್’ ಗ್ರಂಥ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 4:17 IST
Last Updated 4 ಏಪ್ರಿಲ್ 2022, 4:17 IST
ಕಲಬುರಗಿಯಲ್ಲಿ ಭಾನುವಾರ ‘ಮರೆಯದ ಮಾಣಿಕ್ಯ ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌’ ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಶಾಸಕ ದತ್ತಾತ್ರೇಯ ಪಾಟೀಲ ರೇವೂರು, ವರಜ್ಯೋತಿ ಭಂತೆ, ಮಿಲಿಂದ ಸರಕಾರ್‌, ಸುರೇಶ ಶರ್ಮಾ, ಫಕೀರಪ್ಪ ಛಲವಾದಿ, ಪ್ರೊ.ಐ.ಎಸ್‌. ವಿದ್ಯಾಸಾಗರ, ಸುರೇಶ ಬಡಿಗೇರ, ವಿಶಾಲ್‌ ಧರ್ಗಿ ಇದ್ದರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಭಾನುವಾರ ‘ಮರೆಯದ ಮಾಣಿಕ್ಯ ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌’ ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಶಾಸಕ ದತ್ತಾತ್ರೇಯ ಪಾಟೀಲ ರೇವೂರು, ವರಜ್ಯೋತಿ ಭಂತೆ, ಮಿಲಿಂದ ಸರಕಾರ್‌, ಸುರೇಶ ಶರ್ಮಾ, ಫಕೀರಪ್ಪ ಛಲವಾದಿ, ಪ್ರೊ.ಐ.ಎಸ್‌. ವಿದ್ಯಾಸಾಗರ, ಸುರೇಶ ಬಡಿಗೇರ, ವಿಶಾಲ್‌ ಧರ್ಗಿ ಇದ್ದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಮಹಾಜ್ಞಾನಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಚಿಂತನೆಗಳು ಅಜರಾಮರ. ಸೂರ್ಯ, ಚಂದ್ರ, ಭೂಮಿ ಇರುವವರೆಗೂ ಅವರ ಆದರ್ಶ ವಿಚಾರಗಳು ಜೀವಂತ ಇರುತ್ತವೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

ಶ್ರೀನಿಧಿ– ಸುಪ್ರೀತ್‌ ಪ್ರಕಾಶನವುನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಠ್ಠಲ ವಗ್ಗನ್‌ ಅವರು ಬರೆದ ‘ಮರೆಯದ ಮಾಣಿಕ್ಯ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್’ ಗ್ರಂಥ ಬಿಡುಗಡೆ ಮತ್ತು ‘ಅನ್ವರ್ಥ ಸಾಧಕ ರತ್ನ’ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಒಬ್ಬ ಮಹಾಮಾನವತಾವಾದಿ. ಸಂವಿಧಾನ ರಚಿಸುವ ಮೂಲಕ ಅವರು ಮಾನವ ಸಮಾನತೆಯನ್ನು ಅಧಿಕೃತವಾಗಿ ಜಾರಿ ಮಾಡಿದ್ದಾರೆ. ಅವರು ಹೆಜ್ಜೆ ಇಟ್ಟ ಪ್ರತಿ ಜಾಗವೂ ತೀರ್ಥಕ್ಷೇತ್ರಕ್ಕೆ ಸಮ’ ಎಂದರು.

ADVERTISEMENT

‘ನಗರದಲ್ಲಿ ‘ಭೀಮಾ ಕೋರೇಗಾಂವ್‌’ ವಿಜಯೋತ್ಸವದ ಸ್ತಂಭ ನಿರ್ಮಿಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದೆ. ಈ ಬೇಡಿಕೆ ಈಡೇರಿಸಲಾಗುವುದು. ಅಲ್ಲದೇ, ನಗರದ ಜಗತ್‌ ವೃತ್ತದಲ್ಲಿರುವ ಡಾ.ಅಂಬೇಡ್ಕರ್‌ ಪುತ್ಥಳಿಯ ಆವರಣದ ಅಭಿವೃದ್ಧಿಗೂ ಕೆಕೆಆರ್‌ಡಿಬಿಯಿಂದ ಅನುದಾನ ನೀಡಲಾಗುವುದು. ಜೊತೆಗೆ ವಿಠ್ಠಲ ವಗ್ಗನ್‌ ಅವರು ಬರೆದ ಈ ಗ್ರಂಥದ ಪ್ರತಿಗಳನ್ನು ಖರೀದಿಸಲಾಗುವುದು’ ಎಂದು ಭರವಸೆ ನೀಡಿದರು.

ಅಂಬೇಡ್ಕರ್‌ ಕಾಲೇಜಿನ ವಿಶ್ರಾಂತ ಪ್ರಚಾರ್ಯ ಪ್ರೊ.ಐ.ಎಸ್.ವಿದ್ಯಾಸಾಗರ ಮಾತನಾಡಿ, ‘ಅಂಬೇಡ್ಕರ್ ಅವರ ಸಮಗ್ರ ಜೀವನದ ಬಗ್ಗೆ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ವಿಠ್ಠಲ ವಗ್ಗನ್‌ ಅವರು ಬರೆದಿದ್ದಾರೆ. ಈ ಗ್ರಂಥ ಖರೀದಿಸಿ ಓದಬೇಕು. ಅಂಬೇಡ್ಕರ್‌ ಜೀವನ– ಸಾಧನೆ ಕುರಿತು ಓದುವಾಗ ಶ್ರದ್ಧೆ ಬಹಳ ಮುಖ್ಯ’ ಎಂದರು.

ಇದಕ್ಕೂ ಮುನ್ನಸಾಂಗಲಿಯ ಮಿಲಿಂದ ಆರ್‌. ಸರಕಾರ್ ಗ್ರಂಥ ಬಿಡುಗಡೆಗೊಳಿಸಿದರು. ಪಾಲಿಕೆ ಸದಸ್ಯ ವಿಶಾಲ ಎಸ್‌. ದರ್ಗಿ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಅಶೋಕ ಅಂಬಲಗಿ, ಎಲ್‌ಐಸಿ ಉಡುಪಿ ವಿಭಾಗದ ನಿವೃತ್ತ ಆಡಳಿತಾಧಿಕಾರಿ ಸದಾಶಿವ ಡಿ. ಬನ್ನೂರ್, ಕಮಲಾಪುರ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ್‌ ಅವರಿಗೆ ‘ಅನ್ವರ್ಥ ಸಾಧಕ ರತ್ನ’ ಪ್ರಶಸ್ತಿ ಪ್ರದಾನ
ಮಾಡಲಾಯಿತು.

ಬೀದರ್‌ ಜಿಲ್ಲೆಯ ಅಣದೂರಿನ ಬುದ್ಧವಿಹಾರದ ವರಜ್ಯೋತಿ ಭಂತೆ ಸಾನ್ನಿಧ್ಯ ವಹಿಸಿದ್ದರು. ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ಸುರೇಶ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಫಕೀರಪ್ಪ ಚಲವಾದಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಡಿ. ಬಡಿಗೇರ, ಕಾಶೀನಾಥ ಮಾಳಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.