ADVERTISEMENT

ಓದು, ಪದವಿಗಿಂತ ಅನುಭಾವ ದೊಡ್ಡದು: ದಾಕ್ಷಾಯಿಣಿ ಶರಣಬಸವಪ್ಪ ಅಪ್ಪ

ಶಕುಂತಲಾ ಪಾಟೀಲ ಜಾವಳಿ ಅವರ ‘ಬೆಳಕು ಮೂಡಿದಾಗ’, ‘ಆಧುನಿಕ ವಚನಗಳು’ ಕೃತಿಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 7:21 IST
Last Updated 23 ಅಕ್ಟೋಬರ್ 2021, 7:21 IST
ಶಕುಂತಲಾ ಪಾಟೀಲ ಜಾವಳಿ ಅವರು ಬರೆದ ‘ಬೆಳಕು ಮೂಡಿದಾಗ’, ‘ಅಧುನಿಕ ವಚನಗಳು’ ಕೃತಿಗಳನ್ನು ಕಲಬುರಗಿಯಲ್ಲಿ ಶುಕ್ರವಾರ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು. ಯಶವಂತರಾವ್ ಶೆಟ್ಟಿ, ನೀಲಾಂಬಿಕಾ ಪೊಲೀಸ್‌ ಪಾಟೀಲ, ದಾಕ್ಷಾಯಿಣಿ ಅವ್ವ, ಎ.ಕೆ.ರಾಮೇಶ್ವರ ಇದ್ದರು
ಶಕುಂತಲಾ ಪಾಟೀಲ ಜಾವಳಿ ಅವರು ಬರೆದ ‘ಬೆಳಕು ಮೂಡಿದಾಗ’, ‘ಅಧುನಿಕ ವಚನಗಳು’ ಕೃತಿಗಳನ್ನು ಕಲಬುರಗಿಯಲ್ಲಿ ಶುಕ್ರವಾರ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು. ಯಶವಂತರಾವ್ ಶೆಟ್ಟಿ, ನೀಲಾಂಬಿಕಾ ಪೊಲೀಸ್‌ ಪಾಟೀಲ, ದಾಕ್ಷಾಯಿಣಿ ಅವ್ವ, ಎ.ಕೆ.ರಾಮೇಶ್ವರ ಇದ್ದರು   

ಕಲಬುರಗಿ: ‘ಮಹಿಳೆಯರು ಸಾಂಸಾರಿಕ ಒತ್ತಡಗಳನ್ನು ದಾಟಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವುದು ಸವಾಲು. ಇತ್ತೀಚಿನ ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳಾ ಸಾಹಿತಿಗಳೂ ಬೆಳಕಿಗೆ ಬರುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಚೇರ್‌ಪರ್ಸನ್‌ ದಾಕ್ಷಾಯಿಣಿ ಶರಣಬಸವಪ್ಪ ಅಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರ ‘ಬೆಳಕು ಮೂಡಿದಾಗ’ ಕವನ ಸಂಕಲನ ಹಾಗೂ ‘ಆಧುನಿಕ ವಚನಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾವುದೇ ಪದವಿ, ಓದಿಗಿಂತ ಅನುಭಾವ ದೊಡ್ಡದು. ಅದರಲ್ಲೂ ಮಹಿಳೆಯೊಬ್ಬರು ಅನುಭವಗಳು ಪುರುಷರಿಗಿಂತ ಬಹಳ ಶಕ್ತಿಯುತ ಹಾಗೂ ಪ್ರಬುದ್ಧವಾಗಿರುತ್ತವೆ. ಇಂಥ ಅನುಭವಗಳನ್ನು ಹೊಸೆದಾಗಿ ಹುಟ್ಟಿಬರುವ ಸಾಹಿತ್ಯ ಕೃತಿಗಳು ಜನಮೆಚ್ಚುಗೆ ಪಡೆಯುತ್ತವೆ. ಈ ದಿಸೆಯಲ್ಲಿ ಶಕುಂತಲಾ ಅವರೂ ಸಾಗಿದ್ದಾರೆ’ ಎಂದರು.

ADVERTISEMENT

ಕೃತಿ ಪರಿಚಯಿಸಿದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಮಹಾದೇವಿ ಹೆಬ್ಬಾಳ, ‘ಕಣ್ಣು ಚೆನ್ನಾಗಿದ್ದರೆ ನೀವು ಜಗತ್ತನ್ನು ನೋಡಬಹುದು; ನಾಲಿಗೆ ಚೆನ್ನಾಗಿದ್ದರೆ ಜಗತ್ತು ನಿಮ್ಮನ್ನು ನೋಡುತ್ತದೆ’ ಎನ್ನುವ ಶಕುಂತಲಾ ಅವರ ವಚನ ಅವರ ಸಾಹಿತ್ಯ ಸತ್ವದ ಪ್ರತೀಕವಾಗಿದೆ. ನಾವು ಮರೆತುಹೋದ ಅಥವಾ ನಮ್ಮಿಂದ ಕಣ್ಮರೆಯಾದ ಹಲವು ಮೌಲ್ಯಗಳನ್ನು ಅವರು ಆಧುನಿಕ ವಚನಗಳ ಸರಳ ಸಾಲುಗಳಲ್ಲಿ ಹಿಡಿದಿಟ್ಟಿದ್ದಾರೆ’ ಎಂದರು.

‘ಬೆಳಕು ಮೂಡಿದಾಗ’ ಕೃತಿ ಪರಿಚಯಿಸಿದ ಗೋದುತಾಯಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ನೀಲಾಂಬಿಕಾ ಪೊಲೀಸ್‌ ಪಾಟೀಲ, ‘ಈ ಕೃತಿಯಲ್ಲಿ ಕವಯತ್ರಿ ತಾವು ಕಂಡ ಹಾಗೂ ಅನುಕರಿಸಿದ ಆದರ್ಶನಗಳಿಗೆ ಶಾಬ್ದಿಕ ರೂಪ ನೀಡಿದ್ದಾರೆ. ಗೃಹಿಣಿಯ ಅನುಭವಗಳೇ ಒಂದು ಗಟ್ಟಿ ಸಾಹಿತ್ಯವಾಗಬಲ್ಲದು. ಮೊಬೈಲ್‌, ಧಾರಾವಾಹಿಗಳನ್ನು ಬಿಟ್ಟು ಹೊರಬಂದರೆ ಸಾಹಿತ್ಯದಂಥ ಅದ್ಭುತ ಕ್ಷೇತ್ರದಲ್ಲಿ ಬೆಳೆಯಬಹುದು’ ಎಂದು ಸಲಹೆ ನೀಡಿದರು.

ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಶರಣಬಸಪ್ಪ ಪಾಟೀಲ ಜಾವಳಿ ವೇದಿಕೆ ಮೇಲಿದ್ದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಪ್ರಸ್ತಾವಿಕ ಮಾತನಾಡಿದರು. ಕೆ.ಗಿರಿಮಲ್ಲ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಜೇಶ್ವರಿ ಚಂದಾ, ಛಾಯಾ ಭರತನೂರ ಗಾಯನ ಪ್ರಸ್ತುತಪಡಿಸಿದರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.