ADVERTISEMENT

ಕಟ್ಟಿಸಂಗಾವಿ ಹೊಸ ಸೇತುವೆ ಬಂದ್; ಹೆದ್ದಾರಿ ಮೇಲೆ ಸಾಲುಗಟ್ಟಿ ನಿಂತ ವಾಹನಗಳು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:58 IST
Last Updated 28 ಸೆಪ್ಟೆಂಬರ್ 2025, 6:58 IST
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಸೇತುವೆ ಬಳಿ ಟ್ರಾಫಿಕ್ ಜಾಮ್ ಉಂಟಾಗಿರುವುದು
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಸೇತುವೆ ಬಳಿ ಟ್ರಾಫಿಕ್ ಜಾಮ್ ಉಂಟಾಗಿರುವುದು   

ಜೇವರ್ಗಿ: ಕಳೆದ ಐದಾರು ವರ್ಷಗಳ ಹಿಂದೆ ಕಟ್ಟಿಸಂಗಾವಿಯ ಬಳಿ ಭೀಮೆಗೆ ಸೇತುವೆ ನಿರ್ಮಿಸಲಾಗಿದೆ. ಆದರೆ ಪ್ರವಾಹ ಹೊಸ ಸೇತುವೆಗೆ ಕಂಟಕವಾಯಿತೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಹೊಸ ಸೇತುವೆ ‍ಪ್ರವಾಹಕ್ಕೆ ನಲುಗುತ್ತಿದೆ. ಯಾವುದೇ ಅನಾಹುತ ಸಂಭವಿಸಬಾರದೆಂಬ ಉದ್ದೇಶದಿಂದ ವಾಹನ ಸಂಚಾರ ಹಾಗೂ ಜನ ಸಂಚಾರವನ್ನು ಶನಿವಾರ ಬೆಳಿಗ್ಗೆಯಿಂದ ನಿರ್ಬಂಧಿಸಲಾಗಿದೆ. ಪೊಲೀಸ್ ಇಲಾಖೆಯ ಸಿಪಿಐ ರಾಜೇಸಾಬ ನದಾಫ್, ಪಿಎಸ್‌ಐ ಗಜಾನಂದ ಬಿರಾದಾರ ನೇತೃತ್ವದಲ್ಲಿ ಕಟ್ಟಿಸಂಗಾವಿ ಸೇತುವೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಬೆಳಿಗ್ಗೆ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್, ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಳೆಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಜನ ಸಂಚಾರ ನಿಷೇಧಿಸಲಾಗಿದೆ.

ಹೊಸ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡಿದರು. ಕಟ್ಟಿಸಂಗಾವಿಯಿಂದ ಜೇವರ್ಗಿ ಪಟ್ಟಣದವರೆಗೆ ಹಾಗೂ ಕಲಬುರಗಿ ರಸ್ತೆಯ ಹಸನಾಪುರದಿಂದ ಫಿರೋಜಾಬಾದ ದರ್ಗಾವರೆಗೆ ವಾಹನಗಳು ಸಾಲುಗಟ್ಟಿ ನಿಂತವು. ಅಲ್ಲಲ್ಲಿ ರಸ್ತೆ ಮೇಲೆ ಲಾರಿ ನಿಲ್ಲಿಸಿದ ಚಾಲಕರು ಹಾಗೂ ಕ್ಲಿನರ್‌ಗಳು ಕುಡಿಯಲು ನೀರು, ಊಟ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಚಾಲಕರು ಕೋಳಕೂರ ರಸ್ತೆ ಮೂಲಕ ಕಲಬುರಗಿ ನಗರದ ಕಡೆ ಸಾಗಲು ಪ್ರಯತ್ನಿಸಿ ಮಧ್ಯದಲ್ಲಿ ಸಿಲುಕಿ ಒದ್ದಾಡಿದರು.

ADVERTISEMENT

ಕೆಲ ಖಾಸಗಿ ಜೀಪ್, ಆಟೊ, ಟಂಟಂಗಳು ಜೇವರ್ಗಿಯಿಂದ ರೇವನೂರ ಕ್ರಾಸ್, ಜನಿವಾರ, ರಾಸಣಗಿ, ಹಂದನೂರ, ಬಣಮಿ, ಕೂಡಿ ದರ್ಗಾ, ಕೋನಹಿಪ್ಪರಗಿ ಮೂಲಕ ಕಲಬುರಗಿ ನಗರಕ್ಕೆ ಓಡಾಟ ನಡೆಸಿದವು. ಜೇವರ್ಗಿಯಿಂದ ಕಲಬುರಗಿಗೆ ಒಬ್ಬರಿಗೆ ₹100 ರಿಂದ ₹150 ದರ ನಿಗದಿ ಮಾಡಿದ್ದರು. ಒಟ್ಟಾರೆ ಬೀದರ್‌-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಹಾಗೂ ಕಲಬುರಗಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ನಿತ್ಯ ಓಡಾಡುವ ಸಾವಿರಾರು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಸೆಲ್ಫಿಗೆ ಮುಗಿಬಿದ್ದ ಯುವಕರು: ಕಟ್ಟಿಸಂಗಾವಿ ಸೇತುವೆ ಬಳಿ ಧುಮ್ಮಿಕ್ಕಿ ಹರಿಯುವ ನೀರು ನೋಡಿ ಕಣ್ತುಂಬಿಕೊಂಡು ಜನತೆ ಸೆಲ್ಫಿ ತೆಗೆದುಕೊಂಡು ಹೋಗುತ್ತಿದ್ದಾರೆ. ಮಧ್ಯಾಹ್ನದವರೆಗೆ ಸೇತುವೆ ಮೇಲೆ ಜನರಿಗೆ ಓಡಾಡಲು ಅವಕಾಶ ನೀಡಲಾಗಿತ್ತು. ನಂತರ ಹರಿವು ಹೆಚ್ಚಾದ ಕಾರಣಕ್ಕೆ ಎರಡೂ ಸೇತುವೆಗಳ ಮೇಲೆ ಜನ ಸಂಚಾರಕ್ಕೆ ನಿಷೇಧ ಹೇರಲಾಯಿತು.

ಸೆಲ್ಫಿ ತೆಗೆದುಕೊಳ್ಳುತ್ತಿರುವ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.